ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿವರ್ಷ ಕಡಲೆಕಾಯಿ ಪರಿಷೆ, ಕರಗ, ಅವರೆ ಮೇಳ, ಕೃಷಿ ಮೇಳ, ಕೇಕ್ ಶೋ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ವರ್ಷದಂತೆ ಈ ವರ್ಷವೂ ನಗರದ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ ನಡೆಸಲಾಗುತ್ತಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ ‘ಎಲ್ಲರಿಗಾಗಿ ಕಲೆ‘ ಎಂಬ ಶೀರ್ಷಿಕೆಯಡಿ ನಗರದಲ್ಲಿ ರಾಷ್ಟ್ರೀಯ ಮಟ್ಟದ ‘ಚಿತ್ರಸಂತೆ‘ ಆಯೋಜಿಸುತ್ತಿದ್ದು, ಕುಮಾರಕೃಪಾ ರಸ್ತೆಯಲ್ಲಿ ನಡೆಯಲಿರುವ 21ನೇ ಚಿತ್ರಸಂತೆ ಇದಾಗಿದೆ.
ಚಿತ್ರಕಲಾ ಪರಿಷತ್ ಪ್ರತಿ ವರ್ಷದ ಆರಂಭ ಅಂದರೆ ಜನವರಿ ತಿಂಗಳಿನಲ್ಲಿ ಮೊದಲನೇ ಭಾನುವಾರ ಈ ಚಿತ್ರಸಂತೆ ನಡೆಸಲಾಗುತ್ತದೆ. ಈ ವರ್ಷವೂ ಜನವರಿ 7ರಂದು ಚಿತ್ರಸಂತೆ ನಡೆಯಲಿದ್ದು, ಬೆಳ್ಳಗ್ಗೆ 8 ಗಂಟೆಗೆ ಆರಂಭವಾಗಿ, ಸಂಜೆ 8 ಗಂಟೆಯವರೆಗೂ ನಡೆಯಲಿದೆ. ಚಿತ್ರಸಂತೆಯಲ್ಲಿ ₹100 ಆರಂಭವಾಗಿ ಲಕ್ಷದವರೆಗೂ ಚಿತ್ರಕಲೆಗಳು ಸಿಗಲಿವೆ. ಈ ಬಾರಿಯ ಚಿತ್ರಸಂತೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ಅಂತರಿಕ್ಷಯಾನದ ಪರಿಕಲ್ಪನೆಯಡಿ ಚಿತ್ರಸಂತೆಯನ್ನು ಈ ಬಾರಿ ಆಯೋಜನೆ ಮಾಡಲಾಗಿದೆ.
ಚಿತ್ರಸಂತೆಗೆ ಬರುವುದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಚಿತ್ರಕಲಾಪ್ರಿಯರಿಗೆ ಆಹ್ವಾನಿಸಲಾಗಿದೆ. ಈಗಾಗಲೇ 3 ಸಾವಿರಕ್ಕೂ ಹೆಚ್ಚು ಚಿತ್ರಕಲಾ ಪ್ರಿಯರು ಚಿತ್ರಸಂತೆಗೆ ಬರಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಈ ಬಾರಿ 7 ಲಕ್ಷಕ್ಕೂ ಹೆಚ್ಚು ಜನರು ಚಿತ್ರಸಂತೆಗೆ ಬರುವ ಸಾಧ್ಯತೆ ಇದೆ.
ಚಿತ್ರಕಲಾ ಪರಿಷತ್ ಚಿತ್ರಸಂತೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳುತ್ತಿದೆ. ಈ ಬಾರಿ ಚಿತ್ರಸಂತೆಯಲ್ಲಿ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಬಾಹ್ಯಾಕಾಶ ಕುರಿತಂತೆ ಚಿತ್ರಕಲೆ, ಶಿಲ್ಪಕಲೆ, ರಾಕೆಟ್ ಹೆಸರಿನಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತಿದೆ.
ಚಂದ್ರಯಾನ-3 ಉಡಾವಣೆಯ ಯಶಸ್ಸಿನ ಹಿನ್ನೆಲೆ, ಚಿತ್ರಸಂತೆಯನ್ನು ಅಂತರಿಕ್ಷಯಾನದ ಶೀರ್ಷಿಕೆಯಡಿ ರಾಕೆಟ್, ಬಾಹ್ಯಾಕಾಶ ಸೇರಿದಂತೆ ಚಿತ್ರಕಲೆ, ಶಿಲ್ಪಕಲೆ ಮತ್ತಿತರ ಪ್ರದರ್ಶನ ಗ್ಯಾಲರಿ ನಿರ್ಮಿಸಲಾಗುವುದು. ಪರಿಷತ್ತಿನ ಆವರಣದಲ್ಲಿ ಬಾಹ್ಯಾಕಾಶ ಕುರಿತಂತೆ ಪ್ರದರ್ಶನವೂ ಇರಲಿದೆ.
ಈ ಸುದ್ದಿ ಓದಿದ್ದೀರಾ? ಬಿಎಂಟಿಸಿ ಬಸ್‌ಗಳಲ್ಲಿ ಆಡಿಯೊ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶಿಸಿದ ಹೈಕೋರ್ಟ್
ಸಾಂಪ್ರದಾಯಿಕ ಮೈಸೂರು ಶೈಲಿಯ ಕಲೆ, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು, ಆಕ್ರಿಲಿಕ್, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಕೊಲಾಜ್, ಲಿಥೋಗ್ರಾಫ್, ಡೂಡಲ್, ಎಂಬೋಸಿಂಗ್, ವಿಡಿಯೋ ಕಲೆ, ಗ್ರಾಫಿಕ್ ಕಲೆ, ಶಿಲ್ಪ ಕಲೆ, ಇನ್ಸ್ಟಲೇಶನ್ (ಪ್ರತಿಧಿಷ್ಠಾಧಿಪನಾ ಕಲೆ), ಪರ್ಫಾರ್ಮೆನ್ಸ್ ಕಲೆ ಹೀಗೆ ನಾನಾ ಮಾಧ್ಯಮದ ಚಿತ್ರಗಳು ಒಂದೇ ಸೂರಿನಡಿ ಪ್ರದರ್ಶನಗೊಳ್ಳಲಿವೆ.
ಎಂದಿನಂತೆ ಕುಮಾರಕೃಪಾ ರಸ್ತೆಯಲ್ಲಿ ಇಡೀ ದಿನ ಸಂತೆ ನಡೆಯುತ್ತದೆ. ರಾಷ್ಟ್ರೀಯ ಮಟ್ಟದ ಚಿತ್ರಸಂತೆಯಾಗಿರುವುದರಿಂದ ಕರ್ನಾಟಕ, ಒಡಿಶಾ, ಪಂಜಾಬ್, ತಮಿಳುನಾಡು, ಕೇರಳ, ಆಂಧ್ರ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ಕಲಾವಿದರು ಆಗಮಿಸಲಿದ್ದಾರೆ.
ಚಿತ್ರಕಲಾ ಸಂತೆಗೆ ಹೆಚ್ಚಿನ ಜನರು ಬರುವ ಹಿನ್ನೆಲೆ ಚಿತ್ರಕಲಾ ಪರಿಷತ್ ರಸ್ತೆ ಸಂಪರ್ಕಿಸುವ ರಸ್ತೆ ಜನವರಿ 7 ರಂದು ಬಂದ್ ಆಗಲಿದೆ.