ಪ್ರಿಯತಮನ ಜತೆಗೆ ಸಹಜೀವನ ನಡೆಸುತ್ತಿದ್ದ ಸೌಮಿನಿ ದಾಸ್ (20) ಹಾಗೂ ಅಬಿಲ್ ಅಬ್ರಾಹಂ (29) ಎಂಬುವವರು ಫ್ಲ್ಯಾಟ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ಸೌಮಿನಿ ದಾಸ್ ಹಾಗೂ ಕೇರಳದ ಅಬಿಲ್ ಮೃತಪಟ್ಟವರು. ಸೌಮಿನಿ ದಾಸ್ ಈಗಾಗಲೇ ವಿವಾಹವಾಗಿದ್ದು, ಬೆಂಗಳೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದರು. ಮೃತ ಅಬಿಲ್ ನಗರದಲ್ಲಿ ಹೋಂ-ನರ್ಸಿಂಗ್ ಕೆಲಸ ಮಾಡುತ್ತಿದ್ದರು.
ಏನಿದು ಘಟನೆ?
ಈಗಾಗಲೇ, ಸೌಮಿನಿ ವಿವಾಹವಾಗಿದ್ದರು. ಬೆಂಗಳೂರಿಗೆ ನರ್ಸಿಂಗ್ ವಿಸ್ಯಾಭ್ಯಾಸ ಮಾಡಲು ಬಂದಿದ್ದರು. ನರ್ಸಿಂಗ್ ವಿದ್ಯಾಭ್ಯಾಸ ಮುಗಿಸಿದ್ದ ಅಬಿಲ್ ನಗರದಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆ, ಅಬಿಲ್ ಮತ್ತು ಸೌಮಿನಿ ಇಬ್ಬರಿಗೂ ಪರಸ್ಪರ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿತ್ತು. ನಂತರ ಇಬ್ಬರು ಒಂದೇ ಫ್ಲ್ಯಾಟ್‌ನಲ್ಲಿ ಸಹಜೀವನ ನಡೆಸುತ್ತಿದ್ದರು.
ಇತ್ತಿಚೆಗೆ ಸೌಮಿನಿ ಪಶ್ವಿಮ ಬಂಗಾಳಕ್ಕೆ ಹೋಗಿದ್ದರು. ಈ ವೇಳೆ, ಬೆಂಗಳೂರಿಗೆ ವಾಪಸ್ ಬರುವಾಗ ಆಕೆಯ ಪತಿಗೆ ಮದುವೆಯಾದಾಗಿನಿಂದಲೂ ನೀನು ನನಗೆ ಕಿರುಕುಳ ನೀಡುತ್ತಿದ್ದೀಯಾ. ನಿನ್ನ ಜೊತೆ ನಾನು ಇನ್ನು ಮುಂದೆ ಇರುವುದಿಲ್ಲ. ಇಲ್ಲಿಗೆ ಮತ್ತೆ ನಾನು ವಾಪಸ್ ಬರುವುದಿಲ್ಲ ಎಂದು ಹೇಳಿದ್ದಾಳೆ.
ಇದರಿಂದ ಅನುಮಾನಗೊಂಡ ಪತಿ ಆಕೆಯ ಬಗ್ಗೆ ಸಂಬಂಧಿಸಿದವರಿಗೆ ಕೇಳಿದಾಗ ಸೌಮಿನಿ ಸಹಜೀವನ ನಡೆಸುತ್ತಿರುವುದು ಗೊತ್ತಾಗಿದೆ. ಬಳಿಕ ಪತಿ ಸೌಮಿನಿಯನ್ನು ಈ ಬಗ್ಗೆ ಪತಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಟ್ಟು ಬಿಡದೆ ಸುರಿದ ಮಳೆ; ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಬಳಿಕ, ಅವರಿಬ್ಬರ ಪ್ರೀತಿ ವಿಚಾರ ಎಲ್ಲರಿಗೂ ತಿಳಿದಿದೆ. ಇನ್ನು ಅವರನ್ನು ಯಾರೂ ಸುಮ್ಮನೆ ಬಿಡುವುದಿಲ್ಲ ಎಂದು ತಿಳಿದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಬೆಂಕಿ ಹಚ್ಚಿಕೊಂಡಿದ್ದ ಸಂದರ್ಭದಲ್ಲಿ ಇಬ್ಬರೂ ಕೂಗಾಡಿದ್ದರು. ಫ್ಲ್ಯಾಟ್‌ನಿಂದ ಕಿರುಚಾಟ ಕೇಳಿ ಸ್ಥಳೀಯರು ಸಹಾಯಕ್ಕೆ ತೆರಳಿದ್ದರು. ಆದರೆ, ಅಷ್ಟರಲ್ಲಾಗಲೇ, ಸೌಮಿನಿ ದಾಸ್ ಅವರು ಸಂಪೂರ್ಣ ಸುಟ್ಟು ಹೋಗಿದ್ದರು. ಅಬಿಲ್ ಅವರು ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿವೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಆದಾಗ್ಯೂ, ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.