ಫೆಂಗಲ್ ಚಂಡಮಾರುತದಿಂದಾಗಿ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಮುಂದಿನ ಎರಡು ದಿನಗಳವರೆಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಸೋಮವಾರ ತಿಳಿಸಿದೆ.
“ಭಾನುವಾರ ಸಂಜೆಯಿಂದಲೂ ಬೆಂಗಳೂರಿನಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಸೋಮವಾರವೂ ವ್ಯಾಪಕ ಮಳೆಯಾಹಿದೆ. ಈ ಪ್ರದೇಶಗಳಲ್ಲಿ ಮೂರನೇ ದಿನದಿಂದ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ” ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
“ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ಭಾನುವಾರದಿಂದ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬೆಂಗಳೂರು, ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಸೋಮವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ” ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.
“ಉಡುಪಿ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆರೆಂಜ್ ಅಲರ್ಟ್ ಎಂದರೆ 11 ಸೆಂ.ಮೀ ನಿಂದ 20 ಸೆಂ.ಮೀ ವರೆಗೆ ಭಾರೀ ಮಳೆಯಾಗುತ್ತದೆ ಎಂದರ್ಥ ಮತ್ತು ಯೆಲ್ಲೋ ಅಲರ್ಟ್( ಹಳದಿ ಎಚ್ಚರಿಕೆ) ಎಂದರೆ 6 ಸೆಂಮೀನಿಂದ 11ಸೆಂಮೀ ನಡುವೆ ಭಾರೀ ಮಳೆಯಾಗುತ್ತದೆಂದು ಅರ್ಥ” ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.
“ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಧಿಕಾರಿಗಳು ಮುಂಜಾಗೃತಾ ಕ್ರಮವಾಗಿ ಡಿಸೆಂಬರ್ 2ರಂದು ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಅಂತೆಯೇ, ಫೆಂಗಲ್ ಚಂಡಮಾರುತದಿಂದ ಉಂಟಾದ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಆರೆಂಜ್ ಅಲರ್ಟ್ ಘೋಷಿಸಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಧಿಕಾರಿ ಡಾ ಮುಲ್ಲೈ ಮುಗಿಲನ್ ಸಲಹೆ ನೀಡಿದ್ದು, ಈಗಾಗಲೇ ಸಮುದ್ರದಲ್ಲಿರುವ ಮೀನುಗಾರರು ತಕ್ಷಣವೇ ಮರಳುವಂತೆ ಸೂಚನೆ ನೀಡಿದ್ದಾರೆ.
ಮಳೆ ತೀವ್ರವಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಕಾರಣ ಇದೇ 3ರಂದು ಉಡುಪಿ, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳ ಎಲ್ಲ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕೊಡಗು ಜಿಲ್ಲೆಗೆ ಹವಾಮಾನ ಇಲಾಖೆ ಭಾರೀ ಮಳೆ ಬೀಳುವ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲೆಯ ಎಲ್ಲೆಡೆ ದಟ್ಟ ಮೋಡಗಳ ಕವಿದಿದ್ದು, ಹಲವೆಡೆ ಸಾಧಾರಣ ಮಳೆಯಾಗುತ್ತಿದೆ.
ಐಎಂಡಿ ಹೇಳಿಕೆಯ ಪ್ರಕಾರ, ಉತ್ತರ ಕರಾವಳಿ ತಮಿಳುನಾಡು ಮತ್ತು ಪುದುಚೇರಿಯ ಮೇಲೆ ವಾಯುಭಾರ ಕುಸಿತ (ಫೆಂಗಲ್ ಚಂಡಮಾರುತದ ಅವಶೇಷ) ಪಶ್ಚಿಮಕ್ಕೆ ಚಲಿಸಿ ಸೋಮವಾರ ಬೆಳಿಗ್ಗೆ 5.30ರ ವೇಳೆಗೆ ತಮಿಳುನಾಡಿನ ಉತ್ತರ ಒಳನಾಡಿನಲ್ಲಿ ನೆಲೆಗೊಂಡಿರುವ ಉತ್ತಮವಾಗಿ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವಾಗಿ ದುರ್ಬಲಗೊಂಡಿದೆ. ತಗ್ಗು ಪ್ರದೇಶಗಳು, ಜಲಾವೃತ ವಲಯಗಳು, ನದಿ ತೀರಗಳು ಮತ್ತು ಕಡಲತೀರಗಳು ಜಲಾವೃತವಾಗುವುದನ್ನು ತಪ್ಪಿಸಲು ನಿವಾಸಿಗಳನ್ನು ಒತ್ತಾಯಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಫೆಂಗಲ್ ಚಂಡಮಾರುತ | ಧಾರಾಕಾರ ಮಳೆಗೆ ಮಲಗಿದ ರಾಗಿ-ಭತ್ತದ ಫಸಲು; ರೈತ ಕಂಗಾಲು
ಡಿಸೆಂಬರ್ 3ರ ವೇಳೆಗೆ ಉತ್ತರ ಕೇರಳ ಮತ್ತು ಕರ್ನಾಟಕದ ಕರಾವಳಿಯ ಆಗ್ನೇಯ ಮತ್ತು ಪಕ್ಕದ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದಲ್ಲಿ ಉಳಿದಿರುವ ಕಡಿಮೆ ಒತ್ತಡದ ವ್ಯವಸ್ಥೆಯು ಮತ್ತೆ ಹೊರಹೊಮ್ಮುವ ನಿರೀಕ್ಷೆಯಿದೆ ಎಂಸು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1077 ಅಥವಾ 0824-2442590ನ್ನು ಸಂಪರ್ಕಿಸಬಹುದು ಎಂದು ಐಎಂಡಿ ತಿಳಿಸಿದೆ.