ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಲ್ಲದೇ ತಾಪಮಾನ ಹೆಚ್ಚಳವಾಗಿತ್ತು. ಬಿಸಿಲಿನ ಬೇಗೆಗೆ ಬೇಸತ್ತಿದ್ದ ಜನ ಮಳೆಯಾದರೇ ಸಾಕು ಎಂದುಕೊಳ್ಳುತ್ತಿದ್ದರು. ಮೇ ಆರಂಭದಲ್ಲಿ ಶುರುವಾದ ಮಳೆ ಜನರ ಮೊಗದಲ್ಲಿ ಮಂದಹಾಸ ತಂದಿತ್ತು. ಜತೆಗೆ, ತಾಪಮಾನವೂ ಇಳಿಕೆಯಾಯಿತು. ಇನ್ನು ನಗರದಲ್ಲಿ ಮಳೆಯಾದ ನಂತರ ಹಳೆಯ ಸಮಸ್ಯೆಗಳೇ ಮತ್ತೆ ಮತ್ತೆ ಉದ್ಬವಿಸಲು ಆರಂಭವಾಗಿವೆ.
2022ರಲ್ಲಿ ಬೆಂಗಳೂರಿನಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ನಗರದ ಹಲವು ಪ್ರದೇಶಗಳಲ್ಲಿ ರಸ್ತೆಗಳ ಮೇಲೆಯೇ ನೀರು ತುಂಬಿತ್ತು. ಹಲವು ಮನೆಗಳಿಗೆ ನೀರು ಹೊಕ್ಕಿತ್ತು. ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಈ ಘಟನೆ ನಡೆದು ಎರಡು ವರ್ಷಗಳಾದರೂ ಈ ವರ್ಷದ ಮುಂಗಾರು ಮಳೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಾವುದೇ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಮಳೆನೀರು ಚರಂಡಿಗಳನ್ನು ಸರಿಪಡಿಸಲಾಗುವುದು, ಅತಿಕ್ರಮಣಗಳನ್ನು ತೆರವು ಮಾಡಲಾಗುವುದು ಸೇರಿದಂತೆ ಹಲವು ಭರವಸೆ ನೀಡಿತ್ತು. ಆದರೆ, ಅದಾವುದು ಇನ್ನೂ ಈಡೇರಿಲ್ಲ.
ನಗರದ ಪ್ರಮುಖ ಲೇಔಟ್ಗಳು ಸೇರಿದಂತೆ ಪೂರ್ವ ಮತ್ತು ಆಗ್ನೇಯ ಪ್ರದೇಶಗಳಲ್ಲಿ ಮುಂಗಾರು ಪೂರ್ವ ಸಿದ್ಧತೆಯ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಬಹಿರಂಗವಾಗಿದೆ.
ನಗರ ಆರು ತಿಂಗಳ ಮಾನ್ಸೂನ್ ಮಳೆಗೆ ಸಿದ್ಧವಾಗುತ್ತಿದ್ದಂತೆ ನೆರೆಹೊರೆಯ ಪ್ರದೇಶಗಳು ಪ್ರವಾಹ ಪೀಡಿತವಾಗಿಯೇ ಉಳಿದಿವೆ. ಸ್ವಲ್ಪ ಮಳೆಯಾದರೂ ನಗರದ ಭೈರತಿಯಲ್ಲಿರುವ ಬ್ಲೆಸ್ಸಿಂಗ್ ಗಾರ್ಡನ್ ಲೇಔಟ್ನಲ್ಲಿ ಪ್ರವಾಹ ಉಂಟಾಗುತ್ತದೆ. ಏಕೆಂದರೆ, ಇಲ್ಲಿ ಸುಗಮವಾಗಿ ನೀರು ಹರಿಯಲು ಅವಕಾಶವೇ ಇಲ್ಲದಂತಾಗಿದೆ. ಇಲ್ಲಿ ಚರಂಡಿಗಳು ಸಂಪೂರ್ಣವಾಗಿ ಘನತ್ಯಾಜ್ಯ ಮತ್ತು ಹೂಳುದಿಂದ ಮುಚ್ಚಿಹೋಗಿದೆ. ಸುಮಾರು ಮೂರು ತಿಂಗಳ ಹಿಂದೆ ಬಿಬಿಎಂಪಿ ಇಲ್ಲಿನ ಚರಂಡಿಗಳಿಗೆ ತಡೆಗೋಡೆಗಳನ್ನು ನಿರ್ಮಿಸಲು ಪ್ರಾರಂಭಿಸಿತು. ಆದರೆ, ಈ ಯೋಜನೆಯು ಅಪೂರ್ಣವಾಗಿ ಉಳಿದಿದೆ. ಸಡಿಲವಾದ ಕೆಸರು ಚರಂಡಿಯನ್ನು ಮತ್ತಷ್ಟು ಮುಚ್ಚಿಹೋಗುವಂತೆ ಮಾಡಿದೆ. ಪ್ರವಾಹದ ಪರಿಸ್ಥಿತಿಯನ್ನು ಇನ್ನಷ್ಟು ಹೆಚ್ಚು ಮಾಡಿದೆ.
“ಇಲ್ಲಿನ ಕೆಲವು ನಿವಾಸಿಗಳು ತಮ್ಮ ಮನೆಯ ಪ್ರವೇಶ ದ್ವಾರಗಳನ್ನು ಎತ್ತರವಾಗಿ ನೀರು ಹೋಗದಂತೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಮನೆಗಳನ್ನು ತೊರೆದಿದ್ದಾರೆ. ಹೆಂಚಿನ ಛಾವಣಿಯ ಮನೆಯೊಂದರ ಮುಂದೆ ‘ಮಾರಾಟಕ್ಕಾಗಿ’ ಎಂಬ ಬೋರ್ಡ್ ಅನ್ನು ಕಾಂಪೌಂಡ್ನಲ್ಲಿ ಅಂಟಿಸಲಾಗಿದೆ. ಜುಲೈ 2022ರಿಂದ ಈ ರೀತಿಯ ಪರಿಸ್ಥಿತಿ ಇಲ್ಲಿ ವರದಿಯಾಗಿದೆ” ಎಂದು ನಿವಾಸಿ ಜಿ ಸುರೇಶ್ ಹೇಳಿದರು.
“ಹಳೆಯ ಕಾಲದ ಜನರು ಈ ಪ್ರದೇಶದಲ್ಲಿಯೇ ವಾಸಿಸುತ್ತಿದ್ದಾರೆ. ಕೆಲವರು ತಮ್ಮ ಕೆಲಸದ ಸಮೀಪ ಸ್ಥಳ ಎಂದು ವಾಸ ಮಾಡುತ್ತಿದ್ದಾರೆ. ನೆರೆಯ ಬಡಾವಣೆಗಳಿಗೆ ಹೋಲಿಸಿದರೆ, ಈ ಪ್ರದೇಶದಲ್ಲಿ ಆಸ್ತಿ ಮೌಲ್ಯ ಶೇ.20ರಷ್ಟು ಕುಸಿದಿದೆ. ಮೂರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ₹30,000ಗೆ 3 ಬಿಎಚ್ಕೆ ಮನೆಯನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಈಗ ₹23,000 ಗೆ ನೀಡಲಾಗುತ್ತಿದೆ” ಎಂದರು.
2022ರಲ್ಲಿ ಪ್ರವಾಹದ ನಂತರ ನಿವಾಸಿಗಳು ಸ್ವಲ್ಪ ಸಮಯದ ಬಳಿಕ ಸ್ಥಳಾಂತರಗೊಂಡರು. ನಗರದ ರೈನ್ಬೋ ಲೇಔಟ್, ಮುನ್ನೇಕೊಳಲ, ಔಟರ್ ರಿಂಗ್ ರೋಡ್ ಬಳಿಯ ಹಲವಾರು ಮನೆಗಳನ್ನು ಜನರು ತೊರೆದಿದ್ದರು ಎಂದು ವರದಿಯಾಗಿದೆ.
“ಕೆಲ ಒತ್ತುವರಿಗಳನ್ನು ಕೆಡವಿ ವರ್ಷದ ಹಿಂದೆಯೇ ಮಳೆನೀರು ಚರಂಡಿ ಕಾಮಗಾರಿ ಆರಂಭಗೊಂಡಿದ್ದರೂ, ರಾಜಕಾಲುವೆ ಪಕ್ಕದ ಮನೆಗಳು ಚರಂಡಿಗಿಂತ ತಗ್ಗು ಪ್ರದೇಶದಲ್ಲಿವೆ. ನೀರು ಹರಿದರೆ ಪ್ರವಾಹದ ಭೀತಿ ಎದುರಾಗಿದೆ” ಎಂದು ಸ್ಥಳೀಯ ನಿವಾಸಿ ಶ್ಯಾಮಲಾ ತಿಳಿಸಿದರು.
ಮಾರತಹಳ್ಳಿಯಲ್ಲಿರುವ ಸ್ಪೈಸ್ ಗಾರ್ಡನ್ ಹಲವಾರು ವಾಣಿಜ್ಯ ಸಂಸ್ಥೆಗಳು, ಅಪಾರ್ಟ್ಮೆಂಟ್ ಬ್ಲಾಕ್ಗಳು, ಪಿಜಿಗಳು ಮತ್ತು ಜನರು ವಾಸಿಸುವ ಸ್ಥಳಗಳನ್ನು ಹೊಂದಿದೆ. ಭಾರೀ ಮಳೆಯ ಕಾರಣ 2023ರಲ್ಲಿ ಇಲ್ಲಿನ ರಸ್ತೆಗಳು, ದೊಡ್ಡ ಗುಂಡಿಗಳು, ಚರಂಡಿಗಳು ಮತ್ತು ನೆಲಮಾಳಿಗೆಗಳು ನೀರಿನಿಂದ ತುಂಬಿದ್ದವು. ಈ ಬಾರಿ ಭಾರೀ ಮಳೆಯಿಲ್ಲದಿದ್ದರೂ ಕೂಡ ರಸ್ತೆಗಳು ಜಲಾವೃತವಾಗಿವೆ.
ಎಸ್ಟೀಮ್ ನಾರ್ತ್ವುಡ್ ಹೌಸಿಂಗ್ ಸೊಸೈಟಿಯಲ್ಲಿ ವಾರಾಂತ್ಯದ ತುಂತುರು ಮಳೆಯ ನಂತರ ಕನಿಷ್ಠ 22 ಐಷಾರಾಮಿ ವಿಲ್ಲಾಗಳು ಜಲಾವೃತಗೊಂಡವು. ಈ ಸ್ಥಳವು ಪ್ರವಾಹ ಪೀಡಿತ ಎಂದು ತಿಳಿದಿದ್ದರೆ, ₹2.2 ಕೋಟಿಯಿಂದ ₹5 ಕೋಟಿ ಹೂಡಿಕೆ ಮಾಡುತ್ತಿರಲಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕ್ಯೂಲೆಕ್ಸ್ ಸೊಳ್ಳೆಗಳಿಂದ ವೆಸ್ಟ್ ನೈಲ್ ಜ್ವರದ ಆತಂಕ
ಯುಕೆಯಿಂದ ನಗರಕ್ಕೆ ಬಂದಿರುವ ವಾಸ್ತುಶಿಲ್ಪಿ ಅಮರನಾಥ್ ಇಲ್ಲಿ ವಿಲ್ಲಾಕ್ಕಾಗಿ ₹4 ಕೋಟಿ ಕೊಟ್ಟು ಕೊಂಡುಕೊಂಡಿದ್ದಾರೆ. “ಒಳಾಂಗಣ ಕೆಲಸ ಇನ್ನೂ ನಡೆಯುತ್ತಿದೆ. ಈಗ ಎಲ್ಲ ಕೆಲಸವೂ ವಿಳಂಬವಾಗಿದೆ. ನಮಗೆ ಈ ಪ್ರದೇಶದಲ್ಲಿ ವಾಸಿಸಲು ಈಗ ಭಯವಾಗುತ್ತಿದೆ” ಎಂದಿದ್ದಾರೆ.
“ಪ್ರವಾಹದ ವೇಳೆ ಕೊಳಚೆ ಮಿಶ್ರಿತ ನೀರಿನಿಂದ ತಮ್ಮ ಮಗಳು ಅನಾರೋಗ್ಯಕ್ಕೆ ಒಳಗಾದ ನಂತರ ಅವರ ಕುಟುಂಬವು ಆರು ದಿನಗಳ ಕಾಲ ಸಾದಹಳ್ಳಿಯ ಜೇಡ್ ಗಾರ್ಡನ್ ಅಪಾರ್ಟ್ಮೆಂಟ್ನಲ್ಲಿರುವ ಸಹೋದರನ ಮನೆಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿತು” ಎಂದು ವಿಲಮೆಂಟ್ ಮಾಲೀಕ ತಾಜ್ ಅನ್ವರ್ ತಿಳಿಸಿದರು.
”ಬಿಬಿಎಂಪಿಯು ಎರಡು ವರ್ಷಗಳ ಹಿಂದೆ ನಮ್ಮ ಹಳ್ಳಿಗಳ ಹಿಂದೆ ಮಳೆನೀರು ಚರಂಡಿಯನ್ನು ನಿರ್ಮಿಸಿದೆ. ಅದು 2021ರಲ್ಲಿ ಇದ್ದಿದ್ದರೆ, ನಾವು ನಮ್ಮ ಮನೆಯನ್ನು ಇಲ್ಲಿ ಖರೀದಿಸುತ್ತಿರಲಿಲ್ಲ”ಎಂದು ಅವರು ಹೇಳಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, “ಎಲ್ಲ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಂಜಿನಿಯರ್ಗಳು ತಾತ್ಕಾಲಿಕವಾಗಿ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ರೈನ್ ಬೋ ಲೇಔಟ್ನಂತಹ ಕೆಲವು ಸ್ಥಳಗಳಲ್ಲಿ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಕೆಲಸ ಮುಂದುವರಿಯಲು ಸಾಧ್ಯವಾಗಲಿಲ್ಲ. ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ನಿವಾಸಿಗಳು ಚರಂಡಿ ನಿರ್ಮಿಸಲು ಪರ್ಯಾಯ ಜಮೀನು ನೀಡಿಲ್ಲ. ಮಳೆ ನೀರು ಹರಿಯಲು ಇರುವ ಎಲ್ಲ ಅಡೆತಡೆಗಳನ್ನು ಬಿಬಿಎಂಪಿ ತೆರವುಗೊಳಿಸಲಿದೆ” ಎಂದರು.
ಮೂಲ : ಡೆಕ್ಕನ್ ಹೆರಾಲ್ಡ್