ರಾಜ್ಯ ರಾಜಧಾನಿ ಬೆಂಗಳೂರಿನ ಶಾಂತಿನಗರ ರಸ್ತೆಯಲ್ಲಿ ಧಾರ್ಮಿಕ ಮೆರವಣಿಗೆ ನಡೆಯುವ ವೇಳೆ, ರಸ್ತೆಯ ಬದಿ ನಿಧಾನಗತಿಯಲ್ಲಿ ಕಾರು ಚಲಾಯಿಸುತ್ತಿದ್ದ ಚಾಲಕ ಮತ್ತು ಆನಂದ ಸ್ವೀಟ್ಸ್ ಸಂಸ್ಥಾಪಕನ ಮೇಲೆ ಹಲ್ಲೆ ಮಾಡಲಾಗಿದೆ.
ಆನಂದ್ ಸ್ವೀಟ್ಸ್ ಸಂಸ್ಥಾಪಕ ಆನಂದ್ ದಯಾಳ್ ದಾದು (72) ಮತ್ತು ಚಾಲಕ ಶ್ಯಾಮ್ ಸುಂದರ್ ಪಿಳ್ಳೈ (36) ಹಲ್ಲೆಗೊಳಗಾದವರು.
ಬೆಂಗಳೂರಿನ ಶಾಂತಿನಗರದ ಲಕ್ಷ್ಮಿ ರಸ್ತೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮೂವರು ದುಷ್ಕರ್ಮಿಗಳು ಆನಂದ್ ಸ್ವೀಟ್ಸ್ ಸಂಸ್ಥಾಪಕ ಮತ್ತು ಅವರ ಕಾರು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.
ಲಕ್ಷ್ಮೀ ರಸ್ತೆಯ 7ನೇ ಕ್ರಾಸ್‌ನಲ್ಲಿ ಬುಧವಾರ ಬೆಳಿಗ್ಗೆ ಆನಂದ್ ದಯಾಳ್ ದಾದು ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ, ರಸ್ತೆಯಲ್ಲಿ ಧಾರ್ಮಿಕ ಮೆರವಣಿಗೆ ಸಾಗುತ್ತಿತ್ತು. ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದರೂ ಚಾಲಕ ಶ್ಯಾಮ್ ಸುಂದರ್ ಪಿಳ್ಳೈ ಅವರು, ಕಾರು ನಿಲ್ಲಿಸದೆ, ರಸ್ತೆ ಬದಿಯಿಂದಲೇ ನಿಧಾನಗತಿಯಲ್ಲಿ ಕಾರು ಚಲಾಯಿಸುತ್ತಿದ್ದರು.
ಧಾರ್ಮಿಕ ಮೆರವಣಿಗೆ ನಡೆಯುತ್ತಿದೆ ಎಂದರೂ ಕಾರಿನಲ್ಲಿ ತೆರಳುತ್ತಿರುವುದರಿಂದ ಕೋಪಗೊಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳು ಯಾವುದೇ ಪ್ರಚೋದನೆ ಇಲ್ಲದೆ ಏಕಾಏಕಿ ಚಾಲಕನಿಗೆ ಥಳಿಸಿದ್ದಾರೆ. ಈ ವೇಳೆ, ಹಲ್ಲೆ ಮಾಡುತ್ತಿದ್ದನ್ನು ತಡೆಯಲು ಹೋದ ಆನಂದ್ ದಯಾಳ್ ದಾದು ಅವರ ಮೇಲೂ ಹಲ್ಲೆ ನಡೆಸಿದ್ದಾರೆ.
“ಆನಂದ್ ಮತ್ತು ಪಿಳ್ಳೈ ಅರಮನೆ ಮೈದಾನದಿಂದ ಹಿಂತಿರುಗುತ್ತಿದ್ದರು. ಈ ವೇಳೆ, ಶಾಂತಿನಗರದ ಲಕ್ಷ್ಮಿ ರಸ್ತೆಯ 7ನೇ ಕ್ರಾಸ್‌ನಲ್ಲಿ ದಾದೂ ಅವರಿಗೆ ಆರೋಪಿಗಳು ಮೊಂಡಾದ ಆಯುಧದಿಂದ ಹಲ್ಲೆ ನಡೆಸಿದ್ದು, ರಕ್ತಸ್ರಾವವಾಗುವಂತೆ ಮಾಡಿದ್ದಾರೆ. ದಾದು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಚಿಕಿತ್ಸೆಗಾಗಿ ಇಬ್ಬರನ್ನು ಆಸ್ಪತ್ರೆಗೆ ರವಾನಿಸಿದ್ದೇವೆ” ಎಂದು ಆನಂದ್ ಅವರ ಪುತ್ರ ಅಂಕೀತ್ ದಾದು ಬುಧವಾರ ಪೊಲೀಸ್ ದೂರು ದಾಖಲಿಸಿದ್ದಾರೆ.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದರು. ಈ ವೇಳೆ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮೂವರು ಆರೋಪಿಗಳನ್ನು ಪತ್ತೆ ಮಾಡಿದರು. ಈ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ.
ಪ್ಲಂಬರ್ ಹರೀಶ್ ಕುಮಾರ್ (23), ದಿನಸಿ ಡೆಲಿವರಿ ಬಾಯ್ ಸಂದೀಪ್ (19) ಬಂಧಿತರು. ಈ ಇಬ್ಬರೂ ಶಾಂತಿನಗರ ನಿವಾಸಿಗಳು ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕದಲ್ಲಿ ಪ್ರತಿ ವರ್ಷ ಶೇ.1ರಷ್ಟು ಕ್ಯಾನ್ಸರ್ ಪ್ರಕರಣಗಳು ಹೆಚ್ಚಳ
“ಘಟನೆಯ ಸಮಯದಲ್ಲಿ ಆರೋಪಿಗಳು ಪಾನಮತ್ತರಾಗಿದ್ದರೇ ಎಂಬುದು ಖಚಿತವಾಗಿಲ್ಲ. ಆಲ್ಕೋಹಾಲ್ ಇರುವಿಕೆಯನ್ನು ಖಚಿತಪಡಿಸಲು ಅವರ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ದಾದು ಅವರ ಮೇಲೆ ಯಾವುದೇ ಆಯುಧದಿಂದ ಹಲ್ಲೆ ನಡೆಸಿಲ್ಲ. ಆದರೆ, ಆರೋಪಿಗಳು ತಮ್ಮ ಮುಷ್ಟಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಇನ್ನೂ ಒಬ್ಬ ಆರೋಪಿಯನ್ನು ಬಂಧಿಸಬೇಕಿದೆ. ಕಿರಿದಾದ ರಸ್ತೆಯಲ್ಲಿ ಮೆರವಣಿಗೆ ಸಾಗಿದಾಗ ಸ್ವಲ್ಪ ಹೊತ್ತು ಕಾಯುವ ಬದಲು ಕಾರು ಚಲಿಸುತ್ತಲೇ ಇದ್ದ ಕಾರಣ ಆರೋಪಿಗಳು ಕೋಪಗೊಂಡು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ. ಆದರೆ, ಕಾರು ಚಾಲಕ ಚಾಲನೆ ಮಾಡುತ್ತಲೇ ಇದ್ದ, ಕಾರಣ ಇದು ಆರೋಪಿಯನ್ನು ಕೆರಳಿಸಿ, ಹಲ್ಲೆ ನಡೆದಿರಬಹುದು”ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಆರೋಪಿಗಳ ವಿರುದ್ಧ ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ.