ಜೈಲಿನಲ್ಲಿರುವ ರೌಡಿಶೀಟರ್‌ವೊಬ್ಬ ಪರಿಚಿತ ಮಹಿಳೆಯ ಫೋಟೋಗಳನ್ನು ಮಾರ್ಫ್ ಮಾಡಿ ಬೆದರಿಕೆ ಹಾಕಿ ಆಕೆಯ ತಾಯಿಯಿಂದ ಹಣ ಪೀಕುತ್ತಿದ್ದನು. ಸದ್ಯ ಆರೋಪಿಯ ವಿರುದ್ಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮನೋಜ್ ಅಲಿಯಾಸ್ ಕೆಂಚ ಜೈಲಿನಲ್ಲಿರುವ ರೌಡಿ ಶೀಟರ್. ಪರಪ್ಪನ ಕಾರಾಗೃಹದಲ್ಲಿರುವ ರೌಡಿ ಶೀಟರ್ ತನ್ನ ಮಗಳ ಮಾರ್ಫ್ ಮಾಡಿದ ಚಿತ್ರಗಳು ಮತ್ತು ವೀಡಿಯೊಗಳನ್ನು ಹಾಕಿ ಬ್ಲಾಕ್ ಮೇಲ್ ಮಾಡಿ ಹಣ ಪೀಕುತ್ತಿದ್ದಾನೆ ಎಂದು ಆರೋಪಿಸಿ 43 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
“ಹಣ ನೀಡದಿದ್ದರೆ ಚಿತ್ರಗಳು ಮತ್ತು ವೀಡಿಯೊಗಳನ್ನು ತನ್ನ ಅಳಿಯನಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ” ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
“ರೌಡಿಶೀಟರ್‌ಗೆ ಸಂತ್ರಸ್ತೆ ತಾಯಿ ಈ ಹಿಂದೆ ₹40 ಸಾವಿರ ಹಣ ನೀಡಿದ್ದರು ಎನ್ನಲಾಗಿದೆ. ಮತ್ತೆ ₹5 ಲಕ್ಷ ನೀಡಲು ಹಣದ ವ್ಯವಸ್ಥೆ ಮಾಡುವಂತೆ ದೂರುದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಹಣ ವಸೂಲಿ ಮಾಡಲು ಜೈಲಿನಿಂದ ವಾಟ್ಸ್‌ಆ್ಯಪ್ ಕರೆ ಮಾಡಿದ್ದನು” ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ನ್ಯೂ ಟೌನ್ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದು, ಮನು, ಆತನ ಸಹಚರ ಕಾರ್ತಿಕ್ ಹಾಗೂ ಇತರರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಮನು ಮತ್ತೊಂದು ಪ್ರಕರಣದಲ್ಲಿ ಜೈಲು ಪಾಲಾಗಿದ್ದು, 2023ರ ಆಗಸ್ಟ್‌ನಿಂದ ದೂರುದಾರರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಫೆಬ್ರವರಿ 9 ರಂದು ದೂರುದಾರರಿಗೆ ಕಾರ್ತಿಕ್ ಕರೆ ಮಾಡಿ ₹5 ಲಕ್ಷ ಹಣ ನೀಡಲು ಕೇಳಿದ್ದಾರೆ. ಆಕೆ ಹಣ ನೀಡಲು ನಿರಾಕರಿಸಿದಾಗ, ಮನು ಮತ್ತೆ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿವಾಹದ ಆನ್ಲೈನ್ ನೋಂದಣಿ ಪ್ರಕ್ರಿಯೆಗೆ ಫೆ.15 ರಿಂದ ಪ್ರಾಯೋಗಿಕ ಚಾಲನೆ
ದೂರುದಾರ ಮಹಿಳೆಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಆರೋಪಿ ತನ್ನ ನಂಬರ್ನಿಂದ ವಾಟ್ಸ್‌ಆ್ಯಪ್ ಮೂಲಕ ಆಕೆಯ ವಿವಾಹಿತ ಮಗಳ ಅಶ್ಲೀಲ ಫೋಟೊ ಕಳುಹಿಸಿದ್ದನು. ತಕ್ಷಣ ದೂರುದಾರ ಮಹಿಳೆ ಆ ನಂಬರಿಗೆ ಕರೆ ಮಾಡಿದಾಗ ”ನಿನ್ನ ಮಗಳ ಇಂತಹ ನಗ್ನ ಫೋಟೋಗಳು ನನ್ನ ಬಳಿ ಇವೆ. ಅವುಗಳನ್ನು ನಿನ್ನ ಅಳಿಯನಿಗೆ ಕಳುಹಿಸುತ್ತೇನೆ. ಕಳುಹಿಸಬಾರದೆಂದರೆ ಹಣ ಕೊಡಬೇಕು” ಎಂದು ಆರೋಪಿ ಬೆದರಿಕೆ ಒಡ್ಡಿದ್ದಾನೆ. ಇದರಿಂದ ಭಯಗೊಂಡ ಮಹಿಳೆ ಆತ ಹೇಳಿದಂತೆ ಎರಡು ಖಾತೆಗಳಿಗೆ ಹಣ ವರ್ಗಾಯಿಸಿದ್ದರು ಎನ್ನಲಾಗಿದೆ.