ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ಮದ್ಯದ ಅಮಲಿನಲ್ಲಿ ದುರ್ವರ್ತನೆ ಪ್ರದರ್ಶಿಸಿ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ (ಅ.25) ರಾತ್ರಿ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಯಲಹಂಕ ನ್ಯೂ ಟೌನ್‌ನಲ್ಲಿರುವ ರೈಲ್ವೇ ವೀಲ್ ಫ್ಯಾಕ್ಟರಿ ಬಳಿ ಆ್ಯಡಂ ಬಿದಪ್ಪ ಅವರು ಅತಿವೇಗವಾಗಿ ವಾಹನ ಚಾಲನೆ ಮಾಡಿದ್ದಾರೆ. ಈ ವೇಳೆ, ವಾಹನ ಸವಾರ ರಾಹುಲ್ ಉನ್ನಿಕೃಷ್ಣನ್ ಎಂಬುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ.
ರಾಹುಲ್ ಉನ್ನಿಕೃಷ್ಣನ್ ಅವರು ಯಲಹಂಕ ಹೊಸನಗರದ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಅನಂತಪುರ ಗೇಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ನಿವಾಸಿ. ರಾಹುಲ್ ಉನ್ನಿಕೃಷ್ಣನ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆ್ಯಡಂ ಬಿದ್ದಪ್ಪ ಅವರನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಏನಿದು ಘಟನೆ?
ಆ್ಯಡಂ ಬಿದ್ದಪ್ಪ ಅವರು ಅ.25 ರಂದು ಮದ್ಯದ ಅಮಲಿನಲ್ಲಿ ಅಪಾಯಕಾರಿಯಾಗಿ ಕಾರು ಚಾಲನೆ ಮಾಡುತ್ತಿದ್ದರು. ಹಿಂದೆ ಇದ್ದ ಮತ್ತೋರ್ವ ಸವಾರ ರಾಹುಲ್ ಎಂಬುವವರು ಹಾರ್ನ್ ಮಾಡಿ ಮುಂದೆ ಕಾರು ಚಾಲನೆ ಮಾಡಿದ್ದಾರೆ.
ಇಷ್ಟಕ್ಕೇ ಕೋಪಗೊಂಡ ಆ್ಯಡಂ ಬಿದ್ದಪ್ಪ, ರಾಹುಲ್ ಅವರ ಕಾರನ್ನು ಓವರ್ ಟೇಕ್ ಮಾಡಿಕೊಂಡು ಬಂದಿದ್ದಾರೆ. ಯಲಹಂಕದ ರೈಲ್ವೆ ವೀಲ್ ಫ್ಯಾಕ್ಟರಿ ಬಳಿ ಅಡ್ಡಗಟ್ಟಿ ಗಲಾಟೆ ಮಾಡಿದ್ದರು. ಈ ವೇಳೆ, ರಾಹುಲ್ ಉನ್ನಿಕೃಷ್ಣನ್ ಅವರು ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ (112) ಕರೆ ಮಾಡಿದ್ದಾರೆ.
ಜತೆಗೆ ತನಗೆ ಪ್ರಭಾವಿ ವ್ಯಕ್ತಿಗಳು ಪರಿಚಯವಿದೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಹುಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರ ಜತೆಗೂ ಕೂಡ ಬಿದ್ದಪ್ಪ ವಾಗ್ವಾದ ನಡೆಸಿದ್ದಾರೆ. ಪೊಲೀಸರು ಬಿದ್ದಪ್ಪ ಅವರಿಗೆ ರಾಹುಲ್ ಅನ್ನು ಏಕೆ ಹಿಂಬಾಲಿಸಿ, ಅವರ ಕಾರನ್ನು ಅಡ್ಡಗಟ್ಟಿದ್ದಿರಿ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕಾರನ್ನು ನಾನು ಹಿಂಬಾಲಿಸಲಿಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
ರಾಹುಲ್ ಸಹಾಯವಾಣಿಗೆ ಕರೆ ಮಾಡಿದ ಆಧಾರದ ಮೇಲೆ ಸ್ಥಳಕ್ಕೆ ಬಂದ ಯಲಹಂಕ ಸಂಚಾರ ಪೊಲೀಸರು ಆ್ಯಡಂನ ಕಾರು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | 100 ದಿನದಲ್ಲಿ 718 ಮೀಟರ್ ಸುರಂಗ ಕೊರೆದು ಹೊರಬಂದ ‘ಟಿಬಿಎಂ ರುದ್ರ’
“ಆಲ್ಕೋಮೀಟರ್ ಪರೀಕ್ಷೆ ಪಾಸಿಟಿವ್ ಆಗಿದ್ದರಿಂದ ಟ್ರಾಫಿಕ್ ಪೊಲೀಸರು ಆ್ಯಡಂ ಬಿದ್ದಪ್ಪ ವಿರುದ್ಧ ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣ ದಾಖಲಿಸಿದ್ದಾರೆ. ಅವರ ರಕ್ತದ ಆಲ್ಕೋಹಾಲ್ ಮಟ್ಟವು ಅನುಮತಿಸಲಾದ 30mg/100 ml ಗೆ ವಿರುದ್ಧವಾಗಿ 127mg/100ml ಎಂದು ಕಂಡುಬಂದಿದೆ” ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ರಾಹುಲ್ ಅವರು ತಮ್ಮ ಕಾರಿನಲ್ಲಿ ಹೆಬ್ಬಾಳದಿಂದ ಮನೆಗೆ ಮರಳುತ್ತಿದ್ದರು ಎಂದು ವಿದ್ಯಾರ್ಥಿ ರಾಹುಲ್ ಉನ್ನಿಕೃಷ್ಣನ್ ಪೊಲೀಸರಿಗೆ ತಿಳಿಸಿದ್ದಾರೆ. ಯಲಹಂಕಕ್ಕೆ ಸಮೀಪದಲ್ಲಿದ್ದಾಗ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಬಿದಪ್ಪ ಪದೇಪದೆ ಹಾರ್ನ್ ಮಾಡಿ ಗಾಡಿಯನ್ನು ಬ್ಲಾಕ್ ಮಾಡಿದ್ದಾರೆ. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಬಿದ್ದಪ್ಪ ಅವರು ಉನ್ನಿಕೃಷ್ಣನ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿದ್ದಪ್ಪ ವಿರುದ್ಧ ಐಪಿಸಿ ಸೆಕ್ಷನ್ 279, 341, 504, ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಆ್ಯಡಂ ಕುಡಿದು ಗಲಾಟೆ ಮಾಡಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಸ್ಯಾಂಡಲ್ವುಡ್ ಖ್ಯಾತ ನಟಿಯೊಬ್ಬರಿಗೆ ಕಳೆದ ವರ್ಷ ಫೆಬ್ರವರಿ ತಿಂಗಳ ಮಧ್ಯರಾತ್ರಿ ಆ್ಯಡಂ ಬಿದ್ದಪ್ಪ ಅಶ್ಲೀಲ ಮೆಸೇಜ್ ಕಳಿಸಿದ್ದಾರೆ ಎಂದು ದೂರು ನೀಡಿ, ಬಂಧನವಾಗಿದ್ದನು. ಈತ ನಟ ಅಭಿಷೇಕ್ ಅಂಬರೀಶ್ ಅವರ ಪತ್ನಿ ಅವಿವಾ ಬಿದ್ದಪ್ಪ ಅವರ ಸಹೋದರ.