ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಿ, ಗರ್ಭಪಾತ ಮಾಡಿಸುತ್ತಿದ್ದ ಜಾಲವೊಂದನ್ನು ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ಭೇದಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮೈಸೂರಿನ ಬನ್ನೂರು ರಸ್ತೆ ವಸಂತನಗರದ ಶಿವಲಿಂಗೇಗೌಡ, ಮಂಡ್ಯ ಜಿಲ್ಲೆ ಕೂಳೇನಹಳ್ಳಿಯ ನಯನಕುಮಾರ್, ಪಾಂಡವಪುರ ತಾಲೂಕಿನ ಸುಂಕದನ್ನೂರು ಗ್ರಾಮದ ನವೀನಕುಮಾರ್, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಟಿ.ಎಂ.ವೀರೇಶ್ ಬಂಧಿತರು.
ಇತ್ತೀಚೆಗೆ ಹೆಣ್ಣು ಭ್ರೂಣ ಪತ್ತೆ ದಂಧೆ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಎಂ.ಪ್ರಶಾಂತ್ ಅವರು ಕೂಡಲೇ ಬೈಯಪ್ಪನಹಳ್ಳಿ ಠಾಣೆ ಪಿಎಸ್ಐ ಮಂಜುನಾಥ್, ಎಎಸ್ಐಗಳಾದ ಗೋವಿಂದರಾಜು, ನಾಗಯ್ಯ ಒಳಗೊಂಡ ತಂಡ ರಚಿಸಿಕೊಂಡು ದಂಧೆಕೋರರ ಬೆನ್ನುಹತ್ತಿದಾಗ ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ.
ಇನ್ನು ತನಿಖೆ ವೇಳೆ, ಹೆಣ್ಣು ಭ್ರೂಣ ಲಿಂಗ ಪತ್ತೆಗೆ ವೈದ್ಯರೇ ಸಹಕಾರ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಆರೋಪಿಗಳು ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆಯಲ್ಲಿ ತೊಡಗಿದ್ದು, ಭ್ರೂಣ ಲಿಂಗ ಪತ್ತೆಗೆ ₹15 ಸಾವಿರದಿಂದ ₹20 ಸಾವಿರ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಹುಲಿ ಉಗುರು | ಎಫ್‌ಎಸ್‌ಎಲ್ ವರದಿ ಬಳಿಕ ಸಂತೋಷ್‌ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ
ಗರ್ಭಿಣಿಯರನ್ನು ಕರೆದುಕೊಂಡು ಹೋಗುತ್ತಿದ್ದ ಆರೋಪಿಗಳು, ಮಂಡ್ಯದ ಆಲೆಮನೆಯಲ್ಲಿಯೇ ಸ್ಕ್ಯಾನಿಂಗ್ ಮಾಡುತ್ತಿದ್ದರು. ಹಳೇ ಮದ್ರಾಸ್ ರಸ್ತೆ ಬಳಿ ಪೊಲೀಸರು ದಾಳಿ ನಡೆಸುತ್ತಲೇ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಇದೇ ವೇಳೆ ಕಾರನ್ನು ಹಿಂಬಾಲಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಹಾಗೆಯೇ, ಗರ್ಭಿಣಿಯರನ್ನು ಕೂಡ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.