ಕಾನೂನು ಪ್ರಕಾರ ಹೆಚ್‌ಐವಿ ಸೋಂಕಿತರ ಬಗ್ಗೆ ಗೌಪ್ಯತೆ ಕಾಪಾಡಬೇಕು. ಆದರೆ, ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಯೊಂದು ಸೋಂಕಿತರೊಬ್ಬರಿಗೆ ಭೇದ-ಭಾವ ತೋರಿ, ಅವರಿಗೆ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರ ವಿರುದ್ಧ ಹೆಚ್‌ಐವಿ ಬಾಧಿತ ವ್ಯಕ್ತಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
“ಖಾಸಗಿ ಕಂಪನಿಯೂ ಸೋಂಕಿತ ವ್ಯಕ್ತಿಯ ಆರೋಗ್ಯದ ಬಗ್ಗೆ ಗೌಪ್ಯತೆ ಕಾಪಾಡದೇ, ಆತನನ್ನು ತುಂಬಾ ಕೀಳಾಗಿ ಕಾಣುತ್ತಿತ್ತು. ಅಲ್ಲದೇ, ಆತನಿಗೆ ಕಂಪನಿಯಲ್ಲಿ ಎಲ್ಲರೊಂದಿಗೆ ಕೂಡಲು ಬಿಡದೇ, ಪ್ರತ್ಯೇಕ ಸ್ಥಳದಲ್ಲಿ ಕೂರಲು ಅನುಮತಿಸಿತ್ತು. ಜತೆಗೆ, ಮನೆಯಿಂದ ಕೆಲಸ ಮಾಡಲು ತಿಳಿಸಿತ್ತು” ಎಂದು ಸೋಂಕಿತ ವ್ಯಕ್ತಿ ದೂರು ನೀಡಿದ್ದಾರೆ.
“ಅಲ್ಲದೇ, ಕೆಲಸಕ್ಕೆ ಹೋದರು ಸಹ ಹಾಜರಾತಿ ಇಲ್ಲ ಎಂದು ಸಂಬಳ ನೀಡಿಲ್ಲ. ನನಗೆ ತುಂಬಾ ಕಿರಿಕಿರಿ ಉಂಟು ಮಾಡಿದ್ದಾರೆ” ಎಂಬ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅತ್ತಿಬೆಲೆ ಅಗ್ನಿ ದುರಂತ | ಮತ್ತೋರ್ವ ಗಾಯಾಳು ಸಾವು; ಮೃತರ ಸಂಖ್ಯೆ 17ಕ್ಕೆ ಏರಿಕೆ
ಹೆಚ್‌ಐವಿ ಸೋಂಕಿನ ಬಗ್ಗೆ ಗೌಪ್ಯತೆ ಕಾಪಾಡದೆ, ಮಾನ ಹಾನಿ ಮಾಡಿದ್ದಾರೆ. ಕೆಲಸ ಮಾಡಿದರೂ ಸಹ ಸಂಬಳ ನೀಡಿಲ್ಲ ಎಂದು ಕಂಪನಿಯ ವಿರುದ್ಧ ಉದ್ಯೋಗಿ ದೂರು ನೀಡಿದ್ದಾರೆ.