2017ರಲ್ಲಿ ಕುಮಾರಸ್ವಾಮಿ ಲೇಔಟ್‌ನಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 9ರಂದು ಮತ್ತೆ ಬಂಧನಕ್ಕೊಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ನಾರಾಯಣಗೌಡ ಅವರಿಗೆ ಜಾಮೀನು ಮಂಜೂರು ಆಗಿದ್ದು, ಕೊನೆಗೂ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನ ವಾಣಿಜ್ಯ ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕರವೇ ಅಧ್ಯಕ್ಷ ನಾರಾಯಣಗೌಡ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆ, ಅವರು ಮಂಗಳವಾರ ಬಿಡುಗಡೆಯಾಗಿದ್ದರು. ಅವರು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ, ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಪೊಲೀಸರು ಅವರನ್ನು ವಶಕ್ಕೆ ಪಡೆದು, ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಬಳಿಕ, ಕಾನೂನು ಪ್ರಕ್ರಿಯೆ ಆರಂಭಿಸಿ, ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಯ ನಂತರ 30ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ, ನ್ಯಾಯಾಲಯ ಜಾಮೀನು ಅರ್ಜಿಯ ತೀರ್ಪನ್ನು ಜನವರಿ 10ಕ್ಕೆ ಕಾಯ್ದಿರಿಸಿತ್ತು. ಹೀಗಾಗಿ, ಅವರು ಇನ್ನೊಂದು ದಿನ ಜೈಲಿನಲ್ಲಿಯೇ ಕಳೆಯುವಂತಾಗಿತ್ತು.
ಜನವರಿ 10ರಂದು ಪೊಲೀಸರು ನಾರಾಯಣಗೌಡರ ವೈದ್ಯಕೀಯ ತಪಾಸಣೆಯ ಬಳಿಕ ಸಂಜೆ 5 ಗಂಟೆಗೆ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಈ ವೇಳೆ, ನಾರಾಯಣಗೌಡ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರು. ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು.
ಏನಿದು ಹಳೆಯ ಪ್ರಕರಣ?
ನಮ್ಮ ಮೆಟ್ರೋದಲ್ಲಿ 2017ರಲ್ಲಿ ಹಿಂದಿ ಬಳಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸತತವಾಗಿ ಪ್ರತಿಭಟಿಸಿತ್ತು. ಕರವೇಯ ಶಾಂತಿಯುತ ಹೋರಾಟಕ್ಕೆ ಕಿವಿಗೊಡದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧವೂ ಪ್ರತಿಭಟಿಸಿತ್ತು. ಈ ಹಿನ್ನೆಲೆ, 2017ರ ಜೂನ್ 20ರಂದು ಆ ಸಮಯದಲ್ಲಿ ಅಸ್ತಿತ್ವದಲ್ಲಿ ಇದ್ದ 24 ಮೆಟ್ರೋ ನಿಲ್ದಾಣಗಳಿಗೆ ಬೆಳಗಿನ ಜಾವ 4 ರಿಂದ 5 ಗಂಟೆಗೆ 24 ಕರವೇ ಮುಖಂಡರ ತಂಡಗಳು ಏಕಕಾಲಕ್ಕೆ ಮೆಟ್ರೋ ನಿಲ್ದಾಣಗಳಿಗೆ ದಾಳಿ ನಡೆಸಿದ್ದವು. ಮೆಟ್ರೋ ನಿಲ್ದಾಣದಲ್ಲಿದ್ದ ಬೋರ್ಡ್‌ಗಳಿಗೆ ಕಪ್ಪು ಮಸಿ ಬಳಿದು ಆಕ್ರೋಶ ಹೊರಹಾಕಿದ್ದರು. ಈ ಘಟನೆ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.
ಈ ಘಟನೆ ಬಳಿಕ ಆಗಿನ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ‘ಮೆಟ್ರೋ ರಾಜ್ಯ ಸರ್ಕಾರದ ಯೋಜನೆ. ಹಾಗಾಗಿ, ಇಲ್ಲಿ ಹಿಂದಿ ಬಳಕೆ ಅವಶ್ಯಕತೆ ಇಲ್ಲ. ಹಿಂದಿ ಪದ ತೆಗೆದುಹಾಕುವುದಾಗಿ’ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಘಟನೆ ಬಳಿಕ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಪದಗಳು ಮರೆಯಾಗಿವೆ.
ಈ ಘಟನೆಗೆ ಸಂಬಂಧಿಸಿದಂತೆ ಕರವೇ ಅಧ್ಯಕ್ಷ ಮತ್ತು ಕಾರ್ಯಕರ್ತರ ವಿರುದ್ಧ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.
ನಾರಾಯಣಗೌಡ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ಖುದ್ದಾಗಿ ಭೇಟಿ ನೀಡಿ, ಭಾಗವಹಿಸದೇ ಇದ್ದರೂ ಸಹ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿರುವ ಹಿಂದಿ ನಾಮಫಲಕಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವೊಂದರಲ್ಲಿ ನಾರಾಯಣಗೌಡರನ್ನು ಸಹ ಆರೋಪಿಯನ್ನಾಗಿ ಮಾಡಲಾಗಿತ್ತು.
2017ರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಹಿನ್ನೆಲೆ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಈ ಹಿನ್ನೆಲೆ, ಪೊಲೀಸರು ನಾರಾಯಣಗೌಡ ಅವರನ್ನು ವಶಕ್ಕೆ ಪಡೆದಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಮತ್ತೆ ಜೈಲು ಸೇರಿದ ಕರವೇ ಅಧ್ಯಕ್ಷ
ಪ್ರಾದೇಶಿಕ ಪಕ್ಷ ಕಟ್ಟಲು ಪಣತೊಟ್ಟ ಕರವೇ
“ಬೆಂಗಳೂರಿನ ವಾಣಿಜ್ಯ ಮಳಿಗೆಗಳ ಮೇಲೆ ಕನ್ನಡ ನಾಮಫಲಕ ಅಳವಡಿಕೆ ಕುರಿತ ಪ್ರತಿಭಟನೆ ವೇಳೆ ಬಂಧನವಾದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಿದ್ದು, ಅವರು ಜಾಮೀನು ಪಡೆದರೂ ಬೇರೆ ಬೇರೆ ಕೇಸ್‌ಗಳಲ್ಲಿ ಸರ್ಕಾರ ಬಂಧಿಸಿ ಪುನಃ ಜೈಲಿಗಟ್ಟುತ್ತಿದೆ. ಆದರೆ, ಕನ್ನಡ ಹೋರಾಟಗಾರರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವ ಸರ್ಕಾರದ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದು, ಪ್ರಾದೇಶಿಕ ಪಕ್ಷವನ್ನು ಕಟ್ಟಿ ನಿಮಗೆ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸುತ್ತೇವೆ” ಎಂದು ಕರವೇ ಪ್ರತಿಜ್ಞೆ ಮಾಡಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ರಾಜ್ಯಾಧ್ಯಕ್ಷೆ ಅಶ್ವಿನಿಗೌಡ ಅವರು, “ಕನ್ನಡ ಪರ ಹೋರಾಟಗಾರರನ್ನು ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ. ಕನ್ನಡಕ್ಕಾಗಿ ಹೋರಾಟ ಮಾಡಿದವರನ್ನು ಜೈಲಿಗೆ ಕಳಿಸುತ್ತಿದ್ದಾರೆ. ನಮ್ಮ ಕಣ್ಣೊರೆಸುವ ಕೈಗಳು ಜೈಲಿನಲ್ಲಿ ಇವೆ. ನಾವು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಯಶಸ್ವಿಯಾಗ್ತೀವಿ. ಮುಂದಿನ ದಿನಗಳಲ್ಲಿ ಇದೆಲ್ಲದಕ್ಕೂ ಸಹ ನಾವು ಉತ್ತರ ಕೊಡ್ತೀವಿ. ಪ್ರಾದೇಶಿಕ ಪಕ್ಷ ಕಟ್ಟಿ ಪಾಠ ಕಲಿಸುತ್ತೇವೆ” ಎಂದು ಪ್ರತಿಜ್ಞೆ ಮಾಡಿದರು.
ಈ ನೆಲದ ಪಕ್ಷಕ್ಕೆ ಒಳ್ಳೆಯ ಬೆಂಬಲ ಸಿಗಬಹುದು.ಕರವೇ ಇನ್ನೂ ತನ್ನ ಅಯ್ಡಿಯಾಲಜಿಯನ್ನು ಸರಿಪಡಿಸಿಕೊಂಡು ಮುನ್ನುಗ್ಗಬೇಕು.