ಬೆಂಗಳೂರು | ವರ್ಷದ ಮೊದಲ ಮಳೆ; ರಸ್ತೆಗಳು ಜಲಾವೃತ, ನೆಲಕ್ಕೊರಗಿದ ಮರಗಳು, ಸಂಚಾರ ಅಸ್ತವ್ಯಸ್ತ

Date:

Advertisements

ಐದು ತಿಂಗಳ ದೀರ್ಘಾವಧಿಯ ನಂತರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ಕಳೆದ ವಾರದಲ್ಲಿ ಸುಮಾರು ಎರಡು ದಿನಗಳ ಕಾಲ ತುಂತುರು ಮಳೆಯಾಗಿತ್ತು. ಆ ಬಳಿಕ, ಸೋಮವಾರ ಸಂಜೆಯವರೆಗೆ ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ಹಲವಾರು ರಸ್ತೆಗಳು ಜಲಾವೃತಗೊಂಡಿದ್ದವು. 2023ರ ಬರಪೀಡಿತ ನಂತರ ನಗರವು ಈ ವರ್ಷ ಪಡೆದ ಅತಿ ಹೆಚ್ಚು ಮಳೆಯಾಗಿದೆ.

ತುಂತುರು ಮಳೆಯಾದ ಎರಡು ದಿನಗಳ ನಂತರ ಸೋಮವಾರ ಸಂಜೆ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದೆ. ನಗರದ ಹಲವೆಡೆ ಆಲಿಕಲ್ಲು ಮಳೆಯಾಗಿದ್ದು, ಸುಮಾರು ಒಂದು ಗಂಟೆ ಮಳೆ ಸುರಿದಿದೆ.

ನಗರದ ಕೆಐಎ ವಿಮಾನ ನಿಲ್ದಾಣದಲ್ಲಿ ಮೇ 6ರಂದು ಸಾಯಂಕಾಲ 5.30ರವರೆಗೆ 3.9 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Advertisements

ಬೆಂಗಳೂರಿನಲ್ಲಿ ರಾತ್ರಿ 8.15ಕ್ಕೆ 13.2ಮಿ.ಮೀ ಮಳೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ದಕ್ಷಿಣ ವಲಯದಲ್ಲಿ ರಾತ್ರಿ 8.15ರವರೆಗೆ 4.57ಮಿ.ಮೀ, ಬೊಮ್ಮನಹಳ್ಳಿ ವಲಯದಲ್ಲಿ 3.33 ಮಿ.ಮೀ, ಮಹದೇವಪುರ ವಲಯ 2.47 ಮಿ.ಮೀ, ಪಶ್ಚಿಮ ವಲಯ 19.22 ಮಿ.ಮೀ, ದಾಸರಹಳ್ಳಿ 0 ಮಿ.ಮೀ, ರಾಜರಾಜೇಶ್ವರಿನಗರ 6.2 ಮಿ.ಮೀ, ಪೂರ್ವ ವಲಯ 10.5 ಮಿ.ಮೀ, ಮತ್ತು ಯಲಹಂಕ ವಲಯದಲ್ಲಿ 10.5 ಮಿ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮಾಹಿತಿ ನೀಡಿದೆ.

ಬೆಂಗಳೂರು ಮಳೆ 1

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮುಂದಿನ ಎರಡು ದಿನ ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಮತ್ತು ರಾತ್ರಿ ವೇಳೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಸುಮಾರು 37 ಡಿಗ್ರಿ ಸೆಲ್ಸಿಯಸ್ ಯಿಂದ 24 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ ಎಂದು ಹೇಳಿದೆ.

ಮಳೆಯ ಅವಾಂತರ

ಮಳೆಯಿಂದ ನಗರದ 33 ಸ್ಥಳಗಳಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, 16 ಸ್ಥಳಗಳಲ್ಲಿ ಮರ ಬಿದ್ದು ಸಂಚಾರ ದಟ್ಟಣೆ ಉಂಟಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

“33 ಸ್ಥಳಗಳಲ್ಲಿ ರಸ್ತೆಗಳು ಜಲಾವೃತಗೊಂಡ ನಂತರ ಪೊಲೀಸರು ಸಂಚಾರವನ್ನು ಬದಲಾಯಿಸಿದರು. ಮೆಜೆಸ್ಟಿಕ್ ಜಲಾವೃತಗೊಂಡಿದ್ದು, ಕೆ.ಆರ್.ಹಡ್ಸನ್ ವೃತ್ತದವರೆಗೆ ರಸ್ತೆಯನ್ನು ನಿರ್ಬಂಧಿಸಲಾಗಿದೆ” ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.

“ಸುಮಾರು 21 ವಾರ್ಡ್‌ಗಳು ಹಾನಿಗೊಳಗಾಗಿವೆ. ಕೆಲವು ವಾರ್ಡ್‌ಗಳಲ್ಲಿ ಹಲವಾರು ರಸ್ತೆಗಳು ಜಲಾವೃತವಾಗಿದ್ದರೆ, ಹಲವೆಡೆ ಮರಗಳು ಬಿದ್ದ ಘಟನೆಗಳು ವರದಿಯಾಗಿವೆ. ವೇಗದ ಗಾಳಿಯಿಂದಾಗಿ ಸುಮಾರು 45 ಮರಗಳು ಬಿದ್ದಿವೆ” ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬೆಂಗಳೂರು ಮಳೆ 3

25ಕ್ಕೂ ಹೆಚ್ಚು ಭಾಗದಲ್ಲಿ ಧರೆಗೆ ಉರುಳಿದ ಮರಗಳು 

ಅರ್ಧಗಂಟೆ ಸುರಿದ ಮಳೆಗೆ ನಗರದ 25ಕ್ಕೂ ಹೆಚ್ಚು ಭಾಗದಲ್ಲಿ ಮರಗಳು ಧರೆಗೆ ಉರುಳಿವೆ. ನಗರದ ಜಯನಗರ, ಬಸವನಗುಡಿ, ಮಲ್ಲೇಶ್ವರಂ, ವಿಜಯನಗರ, ಕೋರಮಂಗಲ, ಬಿಟಿಎಂ ಲೇಔಟ್, ಯಶವಂತರಪುರ ಸೇರದಿಂತೆ ಹಲವೆಡೆ ಮರಗಳು ಧರೆಗೆ ಉರುಳಿವೆ. ದೂರು ಬಂದ ನಗರಗಳಲ್ಲಿ ಮರಗಳನ್ನು ಬಿಬಿಎಂಪಿ ಸಿಬ್ಬಂದಿ ತೆರೆವುಗೊಳಿಸಿದ್ದಾರೆ ಎಂದು ಬಿಬಿಎಂಪಿ ಕಂಟ್ರೋಲ್ ರೂಮ್ ಮಾಹಿತಿ ನೀಡಿದೆ.

ಮಂತ್ರಿಮಾಲ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ನೀರು ಹೋಗಲು ಸ್ಥಳಾವಕಾಶ ಇಲ್ಲದೆ ರಸ್ತೆ ಮೇಲೆ ಸುಮಾರು 2 ಅಡಿಯಷ್ಟು ನೀರು ತುಂಬಿಕೊಂಡಿತ್ತು. ಹೀಗಾಗಿ, ವಾಹನ ಸವಾರರು ಸಂಚರಿಸಲು ಸಮಸ್ಯೆ ಆಗಿತ್ತು. ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇನ್ನು ಹೆಣ್ಣೂರು ಮುಖ್ಯರಸ್ತೆಯ ಲಿಂಗರಾಜ ಪುರಂ ಬಳಿ ಚಲಿಸುತ್ತಿದ್ದ ಕಾರ್‌ ಮೇಲೆ ಮರ ಉರುಳಿಬಿದ್ದಿತ್ತು. ಅದೃಷ್ಟವಶಾತ್‌ ಕಾರ್‌ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ವೀರಸಂದ್ರ ಜಂಕ್ಷನ್ ಬಳಿ ಸಂಪೂರ್ಣ ನೀರಿನಿಂದ ಜಲಾವೃತವಾಗಿತ್ತು, ವಾಹನ ಸವಾರರಿಗೆ ಸಂಚಾರ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದರು.

ಬೆಂಗಳೂರು ಮಳೆ2

ಗೋಡೆ ಕುಸಿದು ಬಾಲಕಿ ಸ್ಥಿತಿ ಗಂಭೀರ

ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಒಂದು ಭಾಗ ಮಳೆಯಿಂದ ಕುಸಿದು ಬಿದ್ದಿದೆ. ಪರಿಣಾಮ 17 ವರ್ಷದ ಬಾಲಕಿಯ ತಲೆಗೆ ತೀವ್ರ ಗಾಯವಾಗಿದ್ದು, ಆಕೆಯ ತಾಯಿಗೆ ಮೂಳೆ ಮುರಿತವಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ಸಮೀಪದ ವಡ್ಡರಪಾಳ್ಯದಲ್ಲಿ ಈ ಘಟನೆ ನಡೆದಿದೆ.

ಗಾಯಾಳುವನ್ನು ದ್ವಿತೀಯ ಪಿಯು ವಿದ್ಯಾರ್ಥಿನಿ ಖುಷಿ ಮತ್ತು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಆಕೆಯ ತಾಯಿ ಸೋನಾಲಿ ಎಂದು ಗುರುತಿಸಲಾಗಿದೆ.

ಸಂಜೆ 6.15ರ ಸುಮಾರಿಗೆ ತಾಯಿ ಮತ್ತು ಮಗಳು ಒಣಗಿದ ಬಟ್ಟೆಗಳನ್ನು ತೆಗೆದುಕೊಳ್ಳಲು ಹೊರಗೆ ಬಂದಾಗ ಭಾರೀ ಮಳೆ ಪ್ರಾರಂಭವಾಗಿದೆ. ಈ ವೇಳೆ ಅವರ ಮನೆಯ ಪಕ್ಕದ ನಾಲ್ಕು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ. ಕಟ್ಟಡದ ಪ್ಯಾರಪೆಟ್‌ನ ಹಾಲೊ ಬ್ಲಾಕ್‌ಗಳು ಅವರ ಮೇಲೆ ಬಿದ್ದಿವೆ. ಘಟನೆ ನಡೆದಾಗ ಸೋನಾಲಿಯ ಪತಿ ಆಟೋ ಚಾಲಕ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಮಳೆ 4 1

ಮತ್ತೊಂದು ಘಟನೆಯಲ್ಲಿ ಬೊಮ್ಮನಹಳ್ಳಿ ಪ್ರದೇಶದಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದಿದೆ. ಆದರೆ, ಯಾರಿಗೂ ಗಾಯಗಳಾಗಿಲ್ಲ. ರಕ್ಷಣಾ ಕಾರ್ಯಾಚರಣೆಗಾಗಿ ತಂಡವನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಾದ್ಯಂತ ಸಂಚಾರ ದಟ್ಟಣೆ

ಮಳೆಯಿಂದಾಗಿ ನಗರದ ಟ್ರಾಫಿಕ್ ಪರಿಸ್ಥಿತಿ ಹದಗೆಟ್ಟಿದ್ದು, ಮರ ಬಿದ್ದ ಘಟನೆಗಳ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ 70ಕ್ಕೂ ಹೆಚ್ಚು ಕರೆಗಳು ಬಂದಿವೆ. ಅಧಿಕಾರಿಗಳ ಪ್ರಕಾರ, ಪಶ್ಚಿಮ ವಲಯದಿಂದ 27 ದೂರುಗಳು ಬಂದಿದ್ದು, ಇದು ಗರಿಷ್ಠ ಕರೆಗಳಾಗಿವೆ.

ದಕ್ಷಿಣ ವಲಯದಲ್ಲಿ 16 ಕರೆಗಳು ಮತ್ತು ಪೂರ್ವ ವಲಯದಿಂದ 14 ದೂರುಗಳು ದಾಖಲಾಗಿವೆ. ಸೋಮವಾರ ರಾತ್ರಿ 8.30ರವರೆಗೆ ರಾಜರಾಜೇಶ್ವರಿ ನಗರದಿಂದ ಆರು ಮತ್ತು ಯಲಹಂಕದಿಂದ ಮೂರು ದೂರುಗಳು ದಾಖಲಾಗಿವೆ.

ಓಕಳಿಪುರಂನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನಗರದ 33 ಸ್ಥಳಗಳಲ್ಲಿ ಭಾರಿ ನೀರು ನಿಂತಿರುವುದನ್ನು ದಾಖಲಾಗಿದೆ.

ಬಿಸಿಲ ಬೇಗೆಯಿಂದ ಬೆಂದು ಹೋಗಿದ್ದ ಬೆಂಗಳೂರು ಜನತೆಗೆ ಮಳೆ ತಂಪೆರೆದಿದೆ. ಆದರೆ, ಬಿಬಿಎಂಪಿ ನಿರ್ಲಕ್ಷ್ಯದಿಂದ ಹತ್ತಾರು ಅವಾಂತರಕ್ಕೆ ಕಾರಣವಾಗಿದೆ.

ವಾಹನ ಸವಾರರು ಜಲಾವೃತಗೊಂಡ ರಸ್ತೆಗಳಲ್ಲಿ ಸಂಚರಿಸಲು ಪರದಾಡಿದರು. ಕೆಲವು ಸ್ಥಳಗಳಲ್ಲಿ, ಸಂಚಾರ ದಟ್ಟಣೆ ಉಂಟಾಗಿತ್ತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X