‘ನಿನ್ನಿಂದ ಕಾಮಗಾರಿ ಕೈ ತಪ್ಪಿ, ನನಗೆ ಅಪಾರ ನಷ್ಟವಾಗಿದೆ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಜಿ ಕಾರ್ಪೋರೇಟರ್ ಜಿ.ಕೆ.ವೆಂಕಟೇಶ್ ಅವರು ಗುತ್ತಿಗೆದಾರರೊಬ್ಬರನ್ನು ಕಿಡ್ನ್ಯಾಪ್ ಮಾಡಿ ₹3 ಕೋಟಿ ಬೇಡಿಕೆ ಇಟ್ಟ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಜಿ.ಕೆ.ವೆಂಕಟೇಶ್ ಅವರನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಏನಿದು ಪ್ರಕರಣ?
ಯಶವಂತಪುರದ ವಾರ್ಡ್ ಕಾಮಗಾರಿಯನ್ನು ಗುತ್ತಿಗೆದಾರ ಚಂದ್ರು ಎಂಬುವವರು ತೆಗೆದುಕೊಂಡಿದ್ದರು. ಇವರಿಗೆ ಗುತ್ತಿಗೆ ಸಿಕ್ಕ ಹಿನ್ನೆಲೆ, ಮಾಜಿ ಕಾರ್ಪೋರೇಟರ್ ಕೋಪಗೊಂಡಿದ್ದರು.
ನಿನ್ನಿಂದ ನನಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಕಾಮಗಾರಿ ಕೂಡ ಕೈ ತಪ್ಪಿದೆ. ಕೂಡಲೇ ನನ್ನ ನಷ್ಟವನ್ನು ತುಂಬಿಕೊಡಬೇಕು ಎಂದು ಗುತ್ತಿಗೆದಾರ ಚಂದ್ರು ಅವರ ಮೇಲೆ ಒತ್ತಡ ಹಾಕಿದ್ದರು.
ಈ ಹಿನ್ನೆಲೆ, ಕಳೆದ ಎರಡು ದಿನಗಳ ಹಿಂದೆ ಮಾಜಿ ಕಾರ್ಪೋರೇಟರ್ ವೆಂಕಟೇಶ್ ಅವರು ಗುತ್ತಿಗೆದಾರ ಚಂದ್ರು ಅವರನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ, ₹3 ಕೋಟಿ ಚೆಕ್ ಪಡೆದು ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಿ ನಂತರ ಬಿಟ್ಟು ಕಳಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಗುತ್ತಿಗೆದಾರ ಚಂದ್ರು ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆ, ಜಿ.ಕೆ.ವೆಂಕಟೇಶ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.