ತನ್ನ ಪತ್ನಿ ಮತ್ತೋಬ್ಬನ ಜತೆ ಓಡಿ ಹೋಗಲು ಸಹಾಯ ಮಾಡಿದ ಎಂದು ಸ್ನೇಹಿತನನ್ನು ಕೊಲೆ ಮಾಡಿದ ಆರೋಪಿಯನ್ನು ಬೆಂಗಳೂರಿನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಿರಣ್ (32) ಮತ್ತು ಆತನ ಸ್ನೇಹಿತ ಅಕ್ಷಯ್ (31) ಬಂಧಿತರು. ಇವರು ಬಾಗಲಗುಂಟೆ ನಿವಾಸಿಗಳು ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ?
ಬಂಧಿತ ಕಿರಣ್ ಸೆಕೆಂಡ್ ಹ್ಯಾಂಡ್ ಬೈಕ್‌ಗಳ ಮಾರಾ ಟಗಾರನಾಗಿದ್ದನು. ಈತನಿಗೆ ಹತ್ಯೆಯಾದ ಕೆಂಗೇರಿಯ ಹೇಮಂತ್‌ನ ಪರಿಚಯವಿತ್ತು. ಕಿರಣ್‌ನ ಹೆಂಡತಿ ಹೇಮಾ ಮರಿಸ್ವಾಮಿ ಜತೆಗೆ ಓಡಿ ಹೋಗಿದ್ದಳು ಎನ್ನಲಾಗಿದೆ.
ಈ ಮರಿಸ್ವಾಮಿ ಮೃತ ಹೇಮಂತ ಸ್ನೇಹಿತ್. ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದ ತನ್ನ ಪತ್ನಿಯನ್ನು ಕಿರಣ್ ಹುಡುಕುತ್ತಿದ್ದಾಗ ಹತ್ಯೆಯಾದ ಹೇಮಂತ ಕರೆ ಮಾಡಿ ‘ನಿನ್ನ ಹೆಂಡತಿ ಮರಿಸ್ವಾಮಿ ಜತೆಗೆ ಓಡಿ ಹೋಗಿದ್ದಾಳೆ’ ಎಂದು ಹೇಳಿದ್ದನು.
ತನ್ನ ಹೆಂಡತಿ ಓಡಿ ಹೋಗಲು ಹೇಮಂತ್ ಸಹಾಯ ಮಾಡಿದ್ದಾನೆ ಎಂದು ಅನುಮಾನ ಪಟ್ಟ ಆರೋಪಿ ಕಿರಣ್ ಅಕ್ಷಯ್ ಜತೆ ಸೇರಿ ಫೆಬ್ರವರಿ 4ರಂದು ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿಗೆ ತೆರಳಿ ಹೇಮಂತ್‌ಗೆ ಕರೆ ಮಾಡಿ ತಮ್ಮ ಬಳಿಗೆ ಕರೆಸಿಕೊಂಡಿದ್ದರು.
ನಂತರ ಹೇಮಂತ್‌ನನ್ನು ಕರೆದುಕೊಂಡು ಬಾರ್‌ನಲ್ಲಿ ಮದ್ಯ ಸೇವಿಸಿ, ನಂತರ ಬಾಗಲಗುಂಟೆಯ ಪಾಪಣ್ಣ ಲೇಔಟ್‌ಗೆ ಹೇಮಂತ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಹೇಮಂತ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೊಣ್ಣೆ ಹಾಗೂ ಕಬ್ಬಿಣದ ವಸ್ತುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಐಷಾರಾಮಿ ಕಾರು ಕೊಡಿಸುವುದಾಗಿ ವೈದ್ಯರೊಬ್ಬರಿಗೆ ನಂಬಿಸಿ ₹6 ಕೋಟಿ ವಂಚನೆ
ಗಾಯಗೊಂಡ ಹೇಮಂತ್‌ನನ್ನು ನೋಡಿದ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಫೆ.5ರಂದು ತಡರಾತ್ರಿ 12 ಗಂಟೆ ಸುಮಾರಿಗೆ ಹೇಮಂತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.