ಒಂದು ದಿನ ರಜೆ ತೆಗೆದುಕೊಂಡಿದಕ್ಕೆ ಕೆಡಿಡಿಎಲ್ ವಾಚ್ ತಯಾರಿಕೆ ಕಂಪನಿಯ ಮ್ಯಾನೇಜರ್ ಮತ್ತು ಸೂಪರವೈಸರ್ ನೀಡಿದ್ದ ಕಿರುಕುಳಕ್ಕೆ ಬೇಸತ್ತು ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ನಡೆದಿದೆ.
ಗೋವಿಂದ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ. ಈತ ಮೂಲತಃ ಆಂಧ್ರಪ್ರದೇಶದ ಗುಡಿಬಂಡೆ ನಿವಾಸಿ. ಕಳೆದ ಆರು ವರ್ಷಗಳಿಂದ ಬೆಂಗಳೂರಿನ ಪೀಣ್ಯ ಕೆಡಿಡಿಎಲ್ ವಾಚ್ ತಯಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆ, ಬೆಂಗಳೂರಿನ ಆರ್‌ಎಮ್‌ಪಿ ಅಪಾರ್ಟ್‌ಮೆಂಟ್ ಮೇಂಟೆನೆನ್ಸ್ ಕೆಲಸ ಮಾಡಿಕೊಂಡು ದಾಸರಹಳ್ಳಿಯಲ್ಲಿ ನೆಲೆಸಿದ್ದರು.
ಕಾರ್ಮಿಕ ಗೋವಿಂದ ರಜೆ ತೆಗೆದುಕೊಂಡ ಹಿನ್ನೆಲೆ, ಕಂಪನಿಯ ಮ್ಯಾನೇಜರ್ ಹಾಗೂ ಸೂಪರ್‌ವೈಸರ್ ಕಿರುಕುಳ ನೀಡುತ್ತಿದ್ದರು. ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಹಾಕುತ್ತಿದ್ದರು.
ಇದರಿಂದ ಬೇಸತ್ತ ಕಾರ್ಮಿಕ ಎಂದಿನಂತೆ ಕಂಪನಿ ಕೆಲಸ ಮುಗಿಸಿ ರಾತ್ರಿ ವೇಳೆ ಅಪಾರ್ಟ್‌ಮೆಂಟ್ ಸ್ಟೇರ್ ಕೇಸ್ ಮೆಟ್ಟಿಲಿನ ಕಂಬಿಗೆ ತಾಯಿಯ ಸೀರೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿರುವ ಶಂಕೆ; ತನಿಖೆಗೆ ಒತ್ತಾಯಿಸಿ ದೂರು ನೀಡಿದ ಯುವತಿ
ಸ್ಥಳಕ್ಕೆ ಆಗಮಿಸಿದ ಬಾಗಲಗುಂಟೆ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಅಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.
ಆರೋಪಿಗಳಾದ ಮ್ಯಾನೇಜರ್ ಗುರುರಾಜ, ಸೂಪರ್‌ವೈಸರ್ ನಂಜಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ…ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಆದಾಗ್ಯೂ, ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.