ಹೆಂಡತಿಯ ಮೇಲೆ ಅನುಮಾನಗೊಂಡ ಪತಿಯೊಬ್ಬ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನವೀನ್ (42) ಆರೋಪಿ. ಸಂತ್ರಸ್ತೆ ಬಿಂದು (33). ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇವರು ನಗರದ ಜೆ.ಪಿ.ನಗರ 5ನೇ ಹಂತದ ವಿನಾಯಕ ನಗರದ ಕಾವೇರಿ ರಸ್ತೆಯ ನಿವಾಸಿ. ಸಂತ್ರಸ್ತೆ ಬಿಂದು ಎಚ್‌ಎಸ್‌ಆರ್ ಲೇಔಟ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 2012ರಲ್ಲಿ ಆರೋಪಿ ನವೀನ್ ಅವರನ್ನು ಮದುವೆಯಾಗಿದ್ದರು.
ಭಾನುವಾರ ಸಂಜೆ 6 ರಿಂದ 8 ಗಂಟೆಯ ನಡುವೆ ಈ ಘಟನೆ ನಡೆದಿದೆ. ಪತಿ ನವೀನ್ ಹರಿತವಾದ ಆಯುಧಗಳಿಂದ ಆಕೆಯ ಮೇಲೆ ಹಲ್ಲೆ ನಡೆಸಿರುವ ಆರೋಪವಿದೆ. ಮಹಿಳೆಯ ಅಪ್ರಾಪ್ತ ಮಗಳು ಹಾಗೂ ನೆರೆಹೊರೆಯವರು ಸಹಾಯಕ್ಕಾಗಿ ಧಾವಿಸಿದ್ದಾರೆ. ಬಳಿಕ ನೆರೆಹೊರೆಯವರು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಮಹಿಳೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಆರೋಪಿ ಪದೇಪದೆ ಆಕೆಯನ್ನು ಕೊಲ್ಲಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಒಂದೊಮ್ಮೆ ಆರೋಪಿ ಸಂತ್ರಸ್ತೆಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ಕರೆದೊಯ್ದು ಕೊಲೆಗೆ ಯತ್ನಿಸಿದ್ದ ಎನ್ನಲಾಗಿದೆ. ಸದ್ಯ ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡುತ್ತಿದ್ದುದನ್ನು ನೋಡಿದರೇ ಆರೋಪಿಗೆ ಅನುಮಾನ ಬರುತ್ತಿತ್ತು. 2023ರಲ್ಲಿ ಬನ್ನೇರುಘಟ್ಟ ಅರಣ್ಯದಲ್ಲಿ ಕಬ್ಬಿಣದ ರಾಡ್‌ನಿಂದ ಆಕೆಯನ್ನು ಕೊಲ್ಲಲು ಯತ್ನಿಸಿದ್ದನು ಎಂಬ ಆರೋಪವಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎರಡರಿಂದ ಐದು ದಿನಗಳವರೆಗೆ ಬಿಸಿ ಗಾಳಿ ತಟ್ಟುವ ಸಾಧ್ಯತೆ
“ಭಾನುವಾರ ಸಂತ್ರಸ್ತೆ ಬಿಂದು ಕಂಪನಿಯ ಪುರುಷ ಸಹೋದ್ಯೋಗಿಯೊಬ್ಬರು ಕೆಲಸದ ವಿಚಾರವಾಗಿ ಮಾತನಾಡಲು ಆಕೆಯ ಮನೆಗೆ ತೆರಳಿದ್ದರು. ತನ್ನ ಪತ್ನಿ ಪುರುಷ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಕೋಪಗೊಂಡ ನವೀನ್ ಆಕೆಯನ್ನು ನಿಂದಿಸಲು ಆರಂಭಿಸಿದ್ದಾನೆ. ಪತ್ನಿ ತನ್ನ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ ಪತಿ ಕತ್ತರಿ ಮತ್ತು ಚಾಕು ತೆಗೆದುಕೊಂಡು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆರೋಪಿ ಹಲವು ಬಾರಿ ಚಾಕುವಿನಿಂದ ಮಹಿಳೆಗೆ ಇರಿದಿದ್ದಾನೆ. ಆಕೆಯ ಮಗಳು ತನ್ನ ನೆರೆಹೊರೆಯವರ ಮನೆಗೆ ಧಾವಿಸಿ ಅಳುತ್ತ ಸಹಾಯಕ್ಕಾಗಿ ಕೋರಿದ್ದಾಳೆ. ಆಗ ನೆರೆಹೊರೆಯವರು ಬಂದು ಕಾಪಾಡಿ, ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಐಪಿಸಿ 324, ಐಪಿಸಿ 341, ಐಪಿಸಿ 506 ಸೇರಿದಂತೆ ಇನ್ನಿತರ ಐಪಿಸಿ ಅಡಿ ಪುಟ್ಟೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ತನಿಖೆ ಮುಂದುವರೆದಿದೆ.