ಸೈಬರ್ ಕ್ರೈಂಗಾಗಿ ಭಾರತೀಯ ಸಿಮ್‌ಗಳನ್ನು ಖರೀದಿ ಮಾಡಿ ಅಕ್ರಮವಾಗಿ ವಿದೇಶಕ್ಕೆ ರವಾನೆ ಮಾಡುತ್ತಿದ್ದ ಆರೋಪಿಯನ್ನು ಸದ್ಯ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ನಾರಾ ಶ್ರೀನಿವಾಸ್ ರಾವ್ ಬಂಧಿತ ಆರೋಪಿ. ಈತ ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣದವನು. ಬಂಧಿತ ಆರೋಪಿ ಭಾರತದ ಸಿಮ್‌ಗಳನ್ನು ಖರೀದಿ ಮಾಡಿ ಪಾರ್ಸಲ್ ಮುಖಾಂತರ ಅಕ್ರಮವಾಗಿ ವಿದೇಶಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದನು.
ಈ ವೇಳೆ, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಿಮ್‌ಗಳು ಪತ್ತೆಯಾಗಿದ್ದು, ಸೈಬರ್ ಕ್ರೈಂ ಮಾಡುವ ಜಾಲದ ಬಗ್ಗೆ ಕಂಡು ಹಿಡಿದಿದ್ದಾರೆ.
ಒಂದು ಪಾರ್ಸಲ್ನಲ್ಲಿ 24, ಮತ್ತೊಂದರಲ್ಲಿ 111 ಸಿಮ್‌ಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು. ಚೆನ್ನೈನ ಸೈಯದ್ ಎಂಬಾತನಿಗೆ ಸೇರಿದ ಕೊರಿಯರ್ ಕಂಪನಿ ಮೂಲಕ ಪಾರ್ಸಲ್ ಬುಕ್ ಆಗಿತ್ತು.
ಏನಿದು ಸಿಮ್ ಅಕ್ರಮ ಸಾಗಾಟ?
ಆರೋಪಿಗಳು ಭಾರತೀಯ ಸಿಮ್‌ಗಳನ್ನು ಖರೀದಿ ಮಾಡಿ ಅಕ್ರಮವಾಗಿ ತೈವಾನ್ ಮತ್ತು ಕಾಂಬೋಡಿಯಾ ಸೇರಿದಂತೆ ಇನ್ನಿತರ ದೇಶಗಳಿಗೆ ಸಾಗಾಟ ಮಾಡುತ್ತಾರೆ.
ವಿದೇಶದಲ್ಲಿ ಕುಳಿತು ಈ ಸಿಮ್‌ಗಳನ್ನು ಬಳಸಿ ಬ್ಯಾಂಕ್ ಖಾತೆ, ವಾಟ್ಸ್‌ಆಪ್ ಅಕೌಂಟ್ ಓಪನ್ ಮಾಡಿಕೊಳ್ಳುತ್ತಾರೆ. ಬಳಿಕ, ಭಾರತದಲ್ಲಿನ ಜನರಿಗೆ ಪಾರ್ಟ್ ಟೈಂ ಕೆಲಸ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಲೂಟಿ ಮಾಡುತ್ತಾರೆ. ಇಲ್ಲದಿದ್ದರೇ, ಷೇರು ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿ ಅಂತ ಆಫರ್ ಕೊಟ್ಟು ವಂಚನೆ ಮಾಡುತ್ತಿದ್ದಾರೆ.
ಈ ದಂಧೆಯ ಮುಖ್ಯ ಕಿಂಗ್‌ಪಿನ್ ಹೈದರಾಬಾದ್ ಮೂಲದ ವ್ಯಕ್ತಿ. ಈತ ವಿಯೆಟ್ನಾಂನಲ್ಲಿ ಕುಳಿತುಕೊಂಡು ಎಲ್ಲವನ್ನು ನೋಡಿಕೊಳ್ಳುತ್ತಿದ್ದನು. ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಒಂದು ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಮಳೆ ಅಬ್ಬರ; ಹಲವೆಡೆ ಮಳೆ ಅವಾಂತರ
ಅಕ್ರಮ ಚಿನ್ನ ಸಾಗಾಟ; ನಾಲ್ವರು ವಶಕ್ಕೆ
ಬಟ್ಟೆಗಳಲ್ಲಿ ಅಡಗಿಸಿಟ್ಟುಕೊಂಡು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬರೋಬ್ಬರಿ ₹1.96 ಕೋಟಿ ಮೌಲ್ಯದ 2.814 ಕೆಜಿ ಚಿನ್ನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ದುಬೈನಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರು ಬ್ಯಾಗ್ನಲ್ಲಿನ ಜೀನ್ಸ್ ಪ್ಯಾಂಟ್, ಟೀ ಶರ್ಟ್ಗಳಲ್ಲಿ ಪೌಡರ್ ರೂಪದ ಚಿನ್ನವನ್ನು ಇಟ್ಟುಕೊಂಡು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದರು. ಆದರೆ, ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ನಡೆಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.
ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ; ತುರ್ತು ಭೂಸ್ಪರ್ಶ
ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶವಾಗಿದೆ.
AI 1132 ಏರ್ ಇಂಡಿಯಾ ವಿಮಾನ ರಾತ್ರಿ 11.20ಕ್ಕೆ ಬೆಂಗಳೂರಿನಿಂದ ಕೇರಳದ ಕೊಚ್ಚಿಗೆ ತೆರಳಲು ಟೇಕ್ ಆಫ್ ಆಗಿತ್ತು. ಆದರೆ, ವಿಮಾನದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ.
ಕೂಡಲೇ, ಎಚ್ಚೆತ್ತ ಪೈಲಟ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಎಮರ್ಜೆನ್ಸಿ ಲ್ಯಾಂಡ್ ಮಾಡಿದರು. ಇದರಿಂದ ಭಾರೀ ಅನಾಹುತ ತಪ್ಪಿದೆ. ವಿಮಾನ ಭೂ ಸ್ಪರ್ಶವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ. ವಿಮಾನದಲ್ಲಿದ್ದ ಸಿಬ್ಬಂದಿ ಸೇರಿ 170 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.