ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 15, ಮೇ 4, 12 ಹಾಗೂ 18 ರಂದು ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದೆ. ಈ ಪಂದ್ಯಗಳ ವೀಕ್ಷಣೆಗಾಗಿ ಐಪಿಎಲ್ ಪ್ರಿಯರಿಗೆ ಅನುಕೂಲವಾಗುವ ದೃಷ್ಟಿಯಿಂದ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ತನ್ನ ಕೊನೆಯ ರೈಲು ಸೇವೆಯನ್ನು ರಾತ್ರಿ 11.30ಕ್ಕೆ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಆದೇಶ ಹೊರಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್), “ಈ ಪಂದ್ಯದ ದಿನಗಳಲ್ಲಿ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್ಗಳು ₹50 ಮಾರಾಟಕ್ಕೆ ಲಭ್ಯವಿದೆ. ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪೇಪರ್ ಟಿಕೆಟ್ಗೆ ವ್ಯವಸ್ಥೆ ಮಾಡಲಾಗಿದೆ” ಎಂದಿದೆ.
“ಪೇಪರ್ ಟಿಕೆಟ್ ಪಡೆದು ಎಲ್ಲ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲು ಅವಕಾಶ ಇದೆ. ಆದರೆ, ಈ ಟಿಕೆಟ್ ರಾತ್ರಿ 8 ರಿಂದ ದಿನದ ಸೇವೆಗಳು ಕೊನೆಗೊಳ್ಳುವರೆಗೆ ಮಾತ್ರ ಮಾನ್ಯವಾಗಲಿದೆ. ಅಲ್ಲದೇ, ಮೇಲೆ ತಿಳಿಸಿರುವ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಕಾದ ಇಳೆಗೆ ತಂಪೆರೆದ ಮಳೆ: ರಾಜ್ಯದ ಜನರ ಮೊಗದಲ್ಲಿ ಮಂದಹಾಸ
“ಎಂದಿನಂತೆ, ಕ್ಯೂಆರ್ ಕೋಡ್ ಟಿಕೆಟ್ ಗಳು, ಸ್ಮಾರ್ಟ್ ಕಾರ್ಡ್ಗಳು ಮತ್ತು ಎನ್‌ಸಿಎಮ್‌ಸಿ ಕಾರ್ಡ್ಗಳನ್ನು ಸಹ ಬಳಸಬಹುದು. ವಾಟ್ಸ್ ಆಪ್, ನಮ್ಮ ಮೆಟ್ರೊ ಆ್ಯಪ್, ಪೇಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಕ್ಯೂಆರ್ ಕೋಡ್ ಟಿಕೆಟ್ಗಳನ್ನು ಖರೀದಿಸಬಹುದು” ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2024 ಪಂದ್ಯಗಳಿಗೆ ನಮ್ಮ ಮೆಟ್ರೋ ಸೇವೆ ವಿಸ್ತರಣೆ.
Extension of Namma Metro Service for the IPL 2024, Bengaluru Matches. Public are requested to make use this facility. pic.twitter.com/Vr1mNIJ94y— ನಮ್ಮ ಮೆಟ್ರೋ (@OfficialBMRCL) April 12, 2024
ಕಬ್ಬನ್ ಪಾರ್ಕ್ ಮತ್ತು ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರಯಾಣಿಕರು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳುವಂತೆ ವಿನಂತಿಸಿದೆ.