ಒಂದೆಡೆ ಲೋಕಸಭಾ ಚುನಾವಣೆಯ ಕಾವು ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಚುರುಕಾಗಿದೆ. ಶುಕ್ರವಾರ ಬೆಳ್ಳಂಬೆಳಿಗ್ಗೆ ಐಟಿ ಇಲಾಖೆ ಅಧಿಕಾರಿಗಳ ತಂಡ ನಗರದ ಹತ್ತಕ್ಕೂ ಹೆಚ್ಚು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದೆ.
ಚುನಾವಣೆಗೆ ಹಣ ಸಾಗಾಟ ಮಾಡಿರುವ ಆರೋಪದ ಹಿನ್ನೆಲೆ ಐಟಿ ಅಧಿಕಾರಿಗಳು ದಾಳಿ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆಯಷ್ಟೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಧಾರವಾಡದಲ್ಲಿ ಉದ್ಯಮಿಯೊಬ್ಬರ ಅಕೌಂಟೆಂಟ್ ಮನೆಯಲ್ಲಿ ಬರೋಬ್ಬರಿ ₹18 ಕೋಟಿ ಪತ್ತೆಯಾಗಿತ್ತು. ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಉದ್ಯಮಿಗಳ ಮನೆಯನ್ನೇ ಗುರಿಯಾಗಿಸಿ ಬೆಂಗಳೂರಿನಲ್ಲಿಯೂ ದಾಳಿ ನಡೆದಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಜೋಡಿ ಕೊಲೆ | ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ?
ಕಾಂಗ್ರೆಸ್ ಜತೆಗೆ ಗರುತಿಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮನೆ ಮೇಲೆ 6 ಕಾರುಗಳಲ್ಲಿ ಬಂದ 20 ಐಟಿ ಅಧಿಕಾರಿಗಳ ತಂಡ ನೆಲಮಂಗಲದಲ್ಲಿ ದಾಳಿ ಶೋಧ ಕಾರ್ಯ ನಡೆಸಿತ್ತು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಆಪ್ತ ಕನಕಪುರ ಕೆಂಪರಾಜು ಮನೆ ಮೇಲೆ ಕೂಡ ಕೆಲವು ದಿನಗಳ ಹಿಂದೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಡಿ.ಕೆ.ಸುರೇಶ್ ಅವರ ಮತ್ತೊಬ್ಬ ಆಪ್ತನ ಮನೆ ಮೇಲೆ ಬೆಂಗಳೂರಿನ ವಾಜರಹಳ್ಳಿಯಲ್ಲಿ ಐಟಿ ದಾಳಿ ನಡೆದಿತ್ತು.