ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿಗೆ 1896ರಲ್ಲಿ ಅರ್ಕಾವತಿ ನದಿಯ ನೀರನ್ನ ಹರಿಸಿದ್ದ ಐತಿಹಾಸಿಕ ಸೋಲದೇವನಹಳ್ಳಿ ಪಂಪ್ ಸ್ಟೇಷನ್ ಪುನಃಶ್ಚೇತನಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಜಲಮಂಡಳಿ ಕೈಗೊಂಡಿದೆ.
ದೇಶದಲ್ಲೇ ಮೊದಲ ಬಾರಿಗೆ ವ್ಯವಸ್ಥಿತವಾದ ನೀರು ಸರಬರಾಜು ವ್ಯವಸ್ಥೆಯನ್ನು ಹೊಂದಿದ ಎರಡನೇ ನಗರ ಬೆಂಗಳೂರು. 1873ರಲ್ಲಿ ಮೊದಲ ಬಾರಿಗೆ ಮಿಲ್ಲರ್ಸ್ ಟ್ಯಾಂಕ್ ಎಂದು ಹೆಸರು ಪಡೆದಂತಹ ಹಲವಾರು ಕೆರೆಗಳ ಜಾಲದ ಮೂಲಕ ಬೆಂಗಳೂರು ನಗರಕ್ಕೆ ನೀರು ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. 1875-77ರ ಧಾತು ಈಶ್ವರ ಕ್ಷಾಮ(Great Famine of 1875-77) ದಿಂದ ಎರಡೂವರೆ ವರ್ಷಗಳ ಕಾಲ ಮಳೆ ಇಲ್ಲದೆ ಎಲ್ಲ ಜಲಮೂಲಗಳೂ ಬತ್ತಿ ಹೋಗಿದ್ದವು.
ಬೆಳೆಯುತ್ತಿರುವ ನಗರದ ನೀರಿನ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅಂದಿನ ಮೈಸೂರು ರಾಜರ ದಿವಾನರಾಗಿದ್ದ ಕೆ.ಶೇಷಾದ್ರಿ ಅಯ್ಯರ್ ಅವರು, ಹೆಸರುಘಟ್ಟ ಕೆರೆಯ ಮೂಲಕ ಅರ್ಕಾವತಿ ನದಿಯ ನೀರನ್ನ ಬೆಂಗಳೂರಿಗೆ ಹರಿಸುವ ಚಿಂತನೆ ನಡೆಸಿದರು. ಚಾಮರಾಜೇಂದ್ರ ವಾಟರ್ ವರ್ಕ್ಸ್ ಎಂದು ಇದಕ್ಕೆ ಹೆಸರಿಡಲಾಗಿತ್ತು.
ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಪುನಃಶ್ಚೇತನ
ಭೀಕರ ಕ್ಷಾಮದಿಂದ ಬಳಲಿದ್ದ ಬೆಂಗಳೂರು ನಗರಕ್ಕೆ ನೀರು ಹರಿಸಿದ್ದ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್‌ನಿಂದ 1896ರಲ್ಲಿ ನೀರು ಹರಿಸಿದಂತೆ ಹೆಸರಘಟ್ಟ ಕೆರೆಯಿಂದ ಮತ್ತೆ ನಗರಕ್ಕೆ ನೀರು ಹರಿಸಲು ಜಲಮಂಡಳಿ ಚಿಂತನೆ ನಡೆಸುತ್ತಿದೆ.
ಸದ್ಯ ಹೆಸರಘಟ್ಟ ಕೆರೆಯಲ್ಲಿ ಸುಮಾರು 0.3 ಟಿಎಂಸಿ ಯಷ್ಟು ನೀರು ಲಭ್ಯವಿದೆ. ಇದಕ್ಕೆ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್‌ನಲ್ಲಿ ಅಗತ್ಯ ಟ್ರೀಟ್‌ಮೆಂಟ್ ನೀಡಿ, ಎಂ.ಇ.ಐ ಲೇಔಟ್‌ನಲ್ಲಿರುವ ಜಲಸಂಗ್ರಾಹಾರಕ್ಕೆ ಪಂಪ್ ಮಾಡಲಾಗುವುದು. ಇಲ್ಲಿನಿಂದ ಅಗತ್ಯವಿರುವಂತಹ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದು ಇದರ ಉದ್ದೇಶವಾಗಿದೆ.
ಏಪ್ರಿಲ್ 20ರ ಒಳಗಾಗಿ ಸಿದ್ದತೆ ಪೂರ್ಣಗೊಳಿಸಲು ಸೂಚನೆ
ಏಪ್ರಿಲ್ 20 ರ ಒಳಗಾಗಿ ಈ ಪಂಪಿಂಗ್ ಸ್ಟೇಷನ್‌ನ ಪುನಶ್ಚೇತನಕ್ಕೆ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳುವಂತೆ ಜಲಮಂಡಳಿ ಅಧ್ಯಕ್ಷ ಡಾ ವಿ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಹಿಳೆಯರ ಕುರಿತು ಎಚ್‌ಡಿಕೆ ಆಕ್ಷೇಪಾರ್ಹ ಹೇಳಿಕೆ; ಪ್ರಕರಣ ದಾಖಲಿಸಲು ಮುಂದಾದ ಮಹಿಳಾ ಆಯೋಗ
“128 ವರ್ಷಗಳ ಹಿಂದಿನ ಭೀಕರ ಬರಗಾಲದ ಸಮಯದಲ್ಲಿ ನಗರದ ಭವಿಷ್ಯಕ್ಕಾಗಿ ಅಂದಿನ ಮಹನೀಯರುಗಳು ಕೈಗೊಂಡ ಮಹತ್ವದ ನಿರ್ಧಾರಗಳಿಂದ ಇಂದು ಬೆಂಗಳೂರು ನಗರ ಸಮರ್ಪಕ ನೀರು ಸರಬರಾಜನ್ನು ಕಾಣುತ್ತಿದೆ. ಮೇ ತಿಂಗಳಲ್ಲಿ ಮಳೆ ಬೀಳದೇ ನೀರಿನ ಕೊರತೆ ಹೆಚ್ಚಾದಲ್ಲಿ ಅದನ್ನ ಎದುರಿಸಲು ಜಲಮಂಡಳಿ ಸಿದ್ದವಾಗುತ್ತಿದೆ. ಗತಕಾಲದ ವೈಭವ ಮತ್ತು ತಂತ್ರಜ್ಞಾನವನ್ನು ಸಾರವಂತಹ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಪುನಃಶ್ಚೇತಗೊಳಿಸುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಇತಿಹಾಸದ ಮೈಲುಗಲ್ಲನ್ನ ಇಂದಿಗೂ ಪ್ರಸ್ತುತಗೊಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ” ಎಂದಿದ್ದಾರೆ.