ಬೆಂಗಳೂರಿನ ಹೊರವಲಯದ ಸರ್ಜಾಪುರ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು, ರಸ್ತೆ ಬದಿ ನಿಂತಿದ್ದ ಬಿಎಂಡಬ್ಲ್ಯೂ ಕಾರಿನ ಗಾಜು ಒಡೆದು ₹13.75 ಲಕ್ಷ ಕದ್ದು ಪರಾರಿಯಾಗಿದ್ದಾರೆ.
ಸೋಂಪುರದ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆರೋಪಿಗಳು ನಡೆಸಿದ ಕೃತ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಒಬ್ಬ ಆರೋಪಿ ಬೈಕ್‌ನಲ್ಲಿ ಕಾಯುತ್ತಿದ್ದಾನೆ. ಅವನ ಸಹಚರ ಬಿಎಂಡಬ್ಲ್ಯೂ ಕಾರಿನ ಚಾಲಕನ ಪಕ್ಕದ ಕಿಟಕಿಯನ್ನು ಒಡೆದು ಹಣವನ್ನು ತೆಗೆದುಕೊಂಡಿದ್ದಾನೆ. ಬಳಿಕ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.
ಐಷಾರಾಮಿ ಕಾರು ಆನೇಕಲ್‌ನ ಕಸಬಾ ಮೂಲದ ಮೋಹನ್ ಬಾಬು(36) ಎಂಬುವರಿಗೆ ಸೇರಿದ್ದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಮುತಗಟ್ಟಿ ಗ್ರಾಮದಲ್ಲಿ ಜಮೀನು ನೋಂದಣಿ ಮಾಡಲು ನನ್ನ ಸ್ನೇಹಿತನಿಂದ ₹5 ಲಕ್ಷ ಎರವಲು ಪಡೆದಿದ್ದೆ, ಜತೆಗೆ ಜಮೀನು ಖರೀದಿಗೆ ನಗದು ಹಣವನ್ನು ತಂದಿದ್ದೆ” ಎಂದು ಬಾಬು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೀರಿಲ್ಲದೆ ಒಣಗುತ್ತಿವೆ ಧೋಬಿ ಘಾಟ್‌ಗಳು; ಕಾರ್ಮಿಕರ ಜೀವನ ಅತಂತ್ರ
ಬಾಬು ಮತ್ತು ಅವರ ಸಂಬಂಧಿ ರಮೇಶ್ ಅವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ ಗಿರಿಯಾಸ್ ಔಟ್‌ಲೆಟ್ ಬಳಿ ಮಧ್ಯಾಹ್ನ 1:30 ರ ಸುಮಾರಿಗೆ ಕಾರನ್ನು ನಿಲ್ಲಿಸಿದರು. ಮಧ್ಯಾಹ್ನ 2.30ಕ್ಕೆ ಬಾಬು ಹಿಂತಿರುಗಿ ನೋಡಿದಾಗ ಕಾರಿನ ಗಾಜು ಒಡೆದಿದ್ದು, ಬ್ಯಾಗ್‌ನಲ್ಲಿ ಇಟ್ಟಿದ್ದ ಹಣ ನಾಪತ್ತೆಯಾಗಿತ್ತು. ನಂತರ ಸರ್ಜಾಪುರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು.
ಸಂತ್ರಸ್ತ ನೀಡಿದ ದೂರಿನ ಮೇರೆಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.