ರಾಜ್ಯ ಮಾವು ಅಭಿವೃದ್ಧಿ ನಿಗಮದ ವತಿಯಿಂದ ಮೇ 24ರಿಂದ ‘ಮಾವು ಮತ್ತು ಹಲಸು’ ಮೇಳ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆರಂಭವಾಗಿದೆ. ತೋಟಗಾರಿಕೆ ಇಲಾಖೆ ಹಾಗೂ ಮಾವು ನಿಗಮ ಮಂಡಳಿ ಅಧಿಕೃತವಾಗಿ ಮಾವು ಮೇಳಕ್ಕೆ ಚಾಲನೆ ನೀಡಿದೆ. ಮಾವಿನ ಜತಗೆ ಹಲಸಿನ ಮೇಳ ಕೂಡ ಇರಲಿದೆ.
ಜೂನ್ 10ರವರೆಗೂ ಈ ಮಾವು ಮೇಳ ಇರಲಿದೆ. ಈ ಬಾರಿ ಅಕಾಲಿಕ ಮಳೆ, ತಾಪಮಾನ ಹೆಚ್ಚಳ ಸೇರಿದಂತೆ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಸೀಸನ್ ತಡವಾಗಿ ಆರಂಭವಾಗಿದೆ.
ಮಾವಿನ ಮೇಳದಲ್ಲಿ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿದಂತೆ ನಾನಾ ಜಿಲ್ಲೆಗಳ ಮಾವು ಬೆಳೆಗಾರರು ಭಾಗವಹಿಸಿದ್ದಾರೆ. ವಾಣಿಜ್ಯ, ಪಾರಂಪರಿಕ ಮಾವಿನ ತಳಿಗಳು, ಜತೆಗೆ ಉಪ್ಪಿನಕಾಯಿಗೆ ಬಳಸುವ ಮಿಡಿ, ಮಿಡಿ ಮಾವು ಜತೆಗೆ ರೈತರು ಬೆಳೆದ ನಾನಾ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತಿದೆ.
ಮೇಳದಲ್ಲಿ ಸುಮಾರು 74 ಮಾವು, 9 ಹಲಸು ಮತ್ತು 14 ಇತರೆ ಹಣ್ಣಿನ ಮಳಿಗೆಗಳು ಇವೆ. ಕೊಪ್ಪಳದ ಕೇಸರ್, ಚಿತ್ರದುರ್ಗ ಮತ್ತು ತುಮಕೂರಿನ ಬಾದಾಮಿ, ರಸಪುರಿ, ಬೆನಿಶಾ, ಮಲಗೋವಾ, ಮಲ್ಲಿಕಾ, ಆಮ್ರಪಾಲಿ, ದಶೇರಿ, ಬಂಗನಪಲ್ಲಿ, ರಸಪುರಿ, ಇಮಾಮ್ ಪಸಂದ್‌ನಂತಹ ತಳಿಗಳು ಮೇಳದಲ್ಲಿ ಲಭ್ಯವಿವೆ.
“ಕಳೆದ ವರ್ಷ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ‘ಕರಿ ಇಶಾಡಿ’ ಮಾವಿನ ತಳಿಯ ಹಣ್ಣುಗಳೂ ಮೇಳಕ್ಕೆ ಬರಲಿವೆ. ಮಾವು ಮತ್ತು ಹಲಸಿನ ವೈವಿಧ್ಯಮಯ ಮೌಲ್ಯವರ್ಧಿತ ಉತ್ಪನ್ನಗಳೂ ಮಾರಾಟಕ್ಕಿವೆ” ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಕಾರ್ಬೈಡ್ ಮುಕ್ತ ಹಾಗೂ ಸಹಜವಾಗಿ ಮಾಗಿದ ಹಣ್ಣುಗಳನ್ನು ರೈತರ ತೋಟದಿಂದ ನೇರವಾಗಿ ಗ್ರಾಹಕರಿಗೆ ಒದಗಿಸುವುದು. ಮಾವು, ಹಲಸು ಹಣ್ಣುಗಳ ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿ ಬೆಳೆಗಾರರಿಗೆ ಯೋಗ್ಯ ಬೆಲೆ ಹಾಗೂ ಗ್ರಾಹಕರಿಗೆ ರುಚಿಯಾದ ಉತ್ಕೃಷ್ಟ ಗುಣಮಟ್ಟದ ತಾಜಾ ಹಣುಗಳು ದೊರಕುವಂತೆ ಮಾಡುವುದು. ಮಾವು ಮತ್ತು ಹಲಸಿನಲ್ಲಿರುವ ತಳಿಗಳ ವೈವಿದ್ಯತೆ ಮತ್ತು ವೈಶಿಷ್ಟ್ಯಗಳ ಪರಿಚಯ ಮತ್ತು ಆಸ್ವಾದನೆಗೆ ಅವಕಾಶ ಕಲ್ಪಿಸುವುದು ಮೇಳದ ಮೂಲ ಉದ್ದೇಶವಾಗಿದೆ.
ಈ ಮೇಳದಲ್ಲಿ ಮಾವು ನಿಗಮದ ತಾಂತ್ರಿಕ ತರಬೇತಿಗಳಿಗೆ ಹಾಜರಾದ ಹಾಗೂ ಮಾವು ಮೇಳದಲ್ಲಿ ಸತತವಾಗಿ ಭಾಗವಹಿಸಿ ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ಸರಬರಾಜು ಮಾಡುತ್ತಿರುವ ಪ್ರಗತಿ ಪರ ರೈತರಿಗೆ ಆದ್ಯತೆ ನೀಡಲಾಗಿದೆ.
ಮಾವಿನ ಹಣ್ಣಿನ ದರ?
ಈ ವರ್ಷದ ಮೇಳದಲ್ಲಿ ನಾನಾ ತಳಿಯ ಮಾವಿನ ಹಣ್ಣುಗಳಿದ್ದು, ತೋಟಗಾರಿಕೆ ಇಲಾಖೆಯೇ ಹಣ್ಣುಗಳ ಬೆಲೆ ನಿಗದಿ ಮಾಡಿದೆ. ಬಾದಾಮಿ – 130, ಬಾದಾಮಿ ಬಾಕ್ಸ್ – 450, ರಸಪುರಿ – 100, ಮಲ್ಲಿಕಾ – 130, ಸೇಂದೂರ – 60, ಸಕ್ಕರೆ ಗುತ್ತಿ – 200, ಮಲಗೋವಾ – 220, ಬಂಗನಪಲ್ಲಿ – 80, ಮಲ್ಲಿಕಾ ಬಾಕ್ಸ್ – 375, ದಶೇರಿ – 137, ತೋತಾಪುರಿ – 50, ಕಾಲಾಪಾಡ್ – 135, ಅಮ್ರಪಾಲಿ – 120, ಕೇಸರ್ – 130, ಇಮಾಮ್ ಪಸಂದ್ – 250, ಆಮ್ಲೆಟ್ – 100 ಇದೆ.
ಪ್ರತಿ ವರ್ಷ ಮಾವಿನ ಸೀಸನ್ನಲ್ಲಿ ರಾಜ್ಯದಲ್ಲಿ ಸುಮಾರು 15 ಲಕ್ಷ ಟನ್ ಮಾವು ಉತ್ಪಾದನೆಯಾಗಬೇಕಿತ್ತು. ಆದರೆ, ಮಳೆಯಿಲ್ಲದ ಪರಿಣಾಮ ಹಾಗೂ ಅಧಿಕ ತಾಪಮಾನದಿಂದಾಗಿ ಕೇವಲ 4-5 ಲಕ್ಷ ಟನ್‌ನಷ್ಟು ಮಾವಿನ ಫಸಲು ಕಡಿಮೆ ಬಂದಿದೆ. ಹೀಗಾಗಿ, ಈ ಬಾರಿ ಮೇಳದಲ್ಲಿ ದರ ಕೊಂಚ ಏರಿಕೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಸೌಂದರ್ಯ ಜಗದೀಶ್ ಆತ್ಮಹತ್ಯೆ | ಬಿಸಿನೆಸ್ ಪಾಲುದಾರರ ವಿರುದ್ಧ ಎಫ್‌ಐಆರ್ ದಾಖಲು
ಪ್ರತಿದಿನ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಗ್ರಾಹಕರಿಗೆ ಮುಕ್ತವಾಗಿರಲಿದೆ. ರಾಜ್ಯದ ನಾನಾ ಜಿಲ್ಲೆಗಳ ಹಲವಾರು ಪ್ರಮುಖ ಹಲಸು ಬೆಳೆಗಾರರು ಮಾರಾಟ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕದಲ್ಲಿ, ಹಲಸು ಬೆಳೆಯನ್ನು 23096 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 39,92,000 ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆ ಮಾಡಲಾಗುತ್ತಿದೆ. ಹಲಸಿನ ತಳಿಗಳು ನಾನಾ ಗಾತ್ರ ಮತ್ತು ಹಳದಿ, ಕೇಸರಿ ಹಾಗೂ ಕೆಂಪು ಬಣ್ಣದ ತೊಳೆಗಳಲ್ಲಿ ಲಭ್ಯವಿರುತ್ತವೆ.