ಬೆಂಗಳೂರಿನ ನೇರಳೆ ಮಾರ್ಗದ ಬೆನ್ನಿಗಾನಹಳ್ಳಿ ನಿಲ್ದಾಣವನ್ನು ಸಂಪರ್ಕಿಸುವ ಸ್ಕೈವಾಕ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ.
ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸದ್ಯ ಈ ವ್ಯಕ್ತಿಯನ್ನು ಬೆಂಗಳೂರು ಮೆಟ್ರೋ ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.
ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿದ್ಯಾರ್ಥಿನಿಯು ಎಫ್ಐಆರ್ ದಾಖಲಿಸಲು ಮುಂದಾಗದ ಕಾರಣ ಪೊಲೀಸರು ವ್ಯಕ್ತಿಗೆ ಎಚ್ಚರಿಕೆ ನೀಡಿ ಕೈಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
“ಗುರುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ವಿದ್ಯಾರ್ಥಿನಿ ಹಳೆಯ ಮದ್ರಾಸ್ ರಸ್ತೆಯನ್ನು ದಾಟಲು ಫುಟ್ ಓವರ್ ಬ್ರಿಡ್ಜ್‌ನಲ್ಲಿ ನಡೆದು ಸಾಗುತ್ತಿರುವಾಗ ಈ ಘಟನೆ ಸಂಭವಿಸಿದೆ. ವಿದ್ಯಾರ್ಥಿನಿ ಮೆಟ್ರೋದಲ್ಲಿ ಪ್ರಯಾಣಿಸಿರಲಿಲ್ಲ. ಆದರೆ, ಕೇವಲ ರಸ್ತೆ ದಾಟಲು ಸ್ಕೈವಾಕ್ ಬಳಸುತ್ತಿದ್ದಳು. ಈ ವೇಳೆ, ಎಸ್ಕೆಲೇಟರ್ ಬಳಿ ಬಂದಾಗ ಎದುರು ದಿಕ್ಕಿನಲ್ಲಿ ಬಂದ ವ್ಯಕ್ತಿ ಉದ್ದೇಶಪೂರ್ವಕವಾಗಿ ವಿದ್ಯಾರ್ಥಿನಿ ಜತೆಗೆ ಅನುಚಿತವಾಗಿ ವರ್ತಿಸಿದ್ದಾನೆ. ನಂತರ, ವಿದ್ಯಾರ್ಥಿನಿಯನ್ನು ಹಿಂಬಾಲಿಸಲು ಪ್ರಾರಂಭಿಸಿದ್ದಾನೆ” ಎಂದು ಮೂಲಗಳು ತಿಳಿಸಿವೆ.
ನಂತರ, ವಿದ್ಯಾರ್ಥಿನಿ ಮೆಟ್ರೋ ಪ್ರವೇಶ ದ್ವಾರದ ಬಳಿ ಮೆಟ್ರೋ ಭದ್ರತಾ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ, ಮೆಟ್ರೋ ಸಿಬ್ಬಂದಿ ಆ ವ್ಯಕ್ತಿಯನ್ನು ಹಿಡಿದು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ವಿದ್ಯಾರ್ಥಿನಿ ಈ ಬಗ್ಗೆ ದೂರು ದಾಖಲಿಸಿದ್ದಾಳೆ. ಆದರೆ, ಎಫ್ಐಆರ್ ದಾಖಲಿಸಲು ವಿದ್ಯಾರ್ಥಿನಿ ಮುಂದಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
“ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿ ಭಿಕ್ಷುಕ ಹಾಗೂ ಪಾನಮತ್ತನಾಗಿದ್ದನು. ಉದ್ದೇಶಪೂರ್ವಕವಾಗಿಯೇ ಯುವತಿಯ ಬಳಿ ಹೋಗಿ, ಆಕೆಯ ಮೇಲೆ ಬೀಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಯುವತಿ ಹಿಂಬಾಲಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾಳೆ. ತನ್ನಷ್ಟಕ್ಕೆ ತಾನು ನಡೆಯುತ್ತಿರುವುದಾಗಿ ಆತ ಹೇಳಿದ್ದಾನೆ. ಬಳಿಕ, ವಿದ್ಯಾರ್ಥಿನಿ ಮೆಟ್ರೋ ಭದ್ರತಾ ಸಿಬ್ಬಂದಿ ಸಹಾಯ ಪಡೆದು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಯುವತಿಯ ಹೇಳಿಕೆಯಂತೆ ಆತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ” ಎಂದು ರಾಮಮೂರ್ತಿನಗರ ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಂಸ್ಕರಿಸಿದ ನೀರು ಬಳಸುವ ಗ್ರಾಹಕರಿಗೆ ರಿಯಾಯಿತಿ: ಜಲಮಂಡಳಿ ಚಿಂತನೆ
“ವ್ಯಕ್ತಿಯ ಬಳಿ ಯಾವುದೇ ಗುರುತಿನ ಚೀಟಿ ಇರಲಿಲ್ಲ. ವಿಚಾರಣೆ ವೇಳೆ ಆತ ಪದೇಪದೆ ತನ್ನ ಹೆಸರನ್ನು ಬದಲು ಮಾಡುತ್ತಿದ್ದನು. ಆತ ಖಚಿತವಾಗಿ ತನ್ನ ಹೆಸರು ಹೇಳದ ಕಾರಣ ಅನಾಧೇಯ ಹೆಸರಿನಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಿಕ್ಷೆ ಬೇಡಿದ ಹಣದಲ್ಲಿ ಕುಡಿಯುತ್ತೇನೆ. ರಾತ್ರಿ ವೇಳೆ ಟಿನ್ ಫ್ಯಾಕ್ಟರಿಯಲ್ಲಿರುವ ದರ್ಗಾದ ಫುಟ್ ಪಾತ್ ಮೇಲೆ ಮಲಗುತ್ತೇನೆ ಎಂದು ಆತ ಹೇಳಿದ್ದನು. ಆತನಿಗೆ ಎಚ್ಚರಿಕೆ ನೀಡಿ, ಬಿಡುಗಡೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.