ಸ್ನೇಹಿತರ ಹಣದ ವಿಚಾರದಲ್ಲಿ ಸಂಧಾನ ಮಾಡಲು ಹೋದ ಕೂಲಿ ಕಾರ್ಮಿಕನೊಬ್ಬನನ್ನು ಕೊಲೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಸಂದ್ರದಲ್ಲಿ ಈ ಘಟನೆ ನಡೆದಿದೆ. ಸಿಂಗಸಂದ್ರ ನಿವಾಸಿ ಗೋಪಾಲ (35) ಕೊಲೆಯಾದ ಕೂಲಿ ಕಾರ್ಮಿಕ. ಕೃತ್ಯ ಎಸಗಿದ ಎಲೆಕ್ಟ್ರಿಷಿಯನ್ ಗಿರೀಶ್ ತಲೆಮರೆಸಿಕೊಂಡಿದ್ದಾನೆ.
ಏನಿದು ಪ್ರಕರಣ?
ಮೃತ ವ್ಯಕ್ತಿ ಗೋಪಾಲ ಸ್ನೇಹಿತ ಕರಿಗೌಡ ಎಂಬಾತನಿಂದ ಆರೋಪಿ ಗಿರೀಶ್ ₹1,500 ಸಾಲ ಪಡೆದುಕೊಂಡಿದ್ದನು. ಆದರೆ, ಹಣವನ್ನು ಹಿಂತಿರುಗಿಸದೇ ಸತಾಯಿಸುತ್ತಿದ್ದನು. ಕರಿಗೌಡ ಈ ಬಗ್ಗೆ ಗೋಪಾಲನ ಬಳಿ ಹೇಳಿಕೊಂಡಿದ್ದನು.
ಹೀಗಾಗಿ, ಗೋಪಾಲ ಆರೋಪಿ ಗಿರೀಶ್‌ಗೆ ಕರೆ ಮಾಡಿ, ಕರಿಗೌಡನ ಹಣ ವಾಪಸ್ ಕೊಡುವಂತೆ ಎಚ್ಚರಿಕೆ ನೀಡಿದ್ದಾನೆ. ಆಗ ಗಿರೀಶ್ ಹಣ ಕೊಡುವುದಾಗಿ ಹೇಳಿದ್ದನು.
ಈ ನಡುವೆ, ಗೋಪಾಲ, ಕರಿಗೌಡ ಹಾಗೂ ಮತ್ತೋರ್ವ ಸ್ನೇಹಿತ್ ಶಶಿಧರ್ ಮೂವರು ಸೇರಿ ಡಿ.2ರಂದು ಬಾರ್‌ವೊಂದರಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಈ ವೇಳೆ, ಗಿರೀಶ್ ಕೂಡ ತನ್ನ ಸ್ನೇಹಿತ್ ಪ್ರದೀಪ್ ಜತೆಗೆ ಬಾರ್‌ಗೆ ಬಂದಿದ್ದಾನೆ.
ಗಿರೀಶ್‌ನನ್ನು ಕಂಡ ಕರಿಗೌಡ ಆತನನ್ನು ಕರೆದು ಹಣ ನೀಡುವಂತೆ ಕೇಳಿದ್ದಾನೆ. ಆತ ಬೇರೆಯವರ ಕಡೆಯಿಂದ ‘ನೀನು ಕರೆ ಮಾಡಿಸಿ ಬೆದರಿಕೆ ಹಾಕಿದ್ದೀಯಾ ಹಣ ನೀಡುವುದಿಲ್ಲ. ಏನು ಮಾಡಿಕೊಳ್ಳುತ್ತಿಯಾ ಮಾಡಿಕೋ ಎಂದಿದ್ದಾನೆ’. ಇದರಿಂದ ಸಿಟ್ಟಿಗೆದ್ದ ಗೋಪಾಲ್ ಗಿರೀಶ್‌ಗೆ ಹೊಡೆದಿದ್ದನು. ಬಳಿಕ ಇತರೆ ಸ್ನೇಹಿತರು ಸಂಧಾನ ಮಾಡಿದ್ದಾರೆ. ಆಗ ಗಿರೀಶ್ ಫೋನ್ ಪೇ ಮೂಲಕ ಕರಿಗೌಡನ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾನೆ.
ಈ ಘಟನೆ ನಂತರ ಎಲ್ಲರೂ ಮನೆಗೆ ತೆರಳಿದ್ದಾರೆ. ಮನೆಗೆ ತೆರಳಿದ ಗಿರೀಶ್ ಕೋಪಗೊಂಡು ಗೋಪಾಲ್ ಸ್ನೇಹಿತ್ ಶಶಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಇದರಿಂದ ಮತ್ತೆ ಸಿಟ್ಟಿಗೆದ್ದ ಗೋಪಾಲ್, ಕರಿಗೌಡ ಹಾಗೂ ಶಶಿ ಮೂವರು ಗಿರೀಶ್ ಮನೆಗೆ ತೆರಳಿದ್ದಾರೆ. ಗಿರೀಶ್‌ಗೆ ಸರಿಯಾಗಿ ಮಾತನಾಡುವಂತೆ ಹೇಳಿ, ಇಲ್ಲವಾದರೆ ಪರಿಣಾಮ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಗಿರೀಶ್ನ ಪತ್ನಿ ತಪ್ಪಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸೇಡು ತೀರಿಸಿಕೊಳ್ಳಲು ಪತಿ ಮೊಬೈಲ್‌ನಿಂದ ಬಾಂಬ್ ಬೆದರಿಕೆ ಸಂದೇಶ ರವಾನಿಸಿದ ಪತ್ನಿ: ಬಂಧನ
ಮಾತನಾಡುವ ಸಮಯದಲ್ಲಿ ಅಡುಗೆ ಮನೆಯಿಂದ ಚಾಕು ತಂದ ಗಿರೀಶ್, ಗೋಪಾಲನ ಬೆನ್ನು ಹಾಗೂ ಎದೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ತಕ್ಷಣವೇ ಗಾಯಗೊಂಡಿದ್ದ ಗೋಪಾಲನನ್ನು ಸ್ನೇಹಿತರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಗೋಪಾಲ ಸಾವನ್ನಪ್ಪಿದ್ದಾನೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಗಿರೀಶ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.