ಬೆಂಗಳೂರು ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) 8 ಕಾನೂನು ಮತ್ತು ಸುವ್ಯವಸ್ಥೆ ಶಾಖೆಗಳ ಅಧಿಕಾರಿಗಳು ನವೆಂಬರ್‌ನಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ 39 ಭಾರತೀಯ ಪ್ರಜೆಗಳು ಮತ್ತು 8 ವಿದೇಶಿಯರನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಮಾದ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, “ಮಾದಕ ವ್ಯಸನಿಗಳ ವಿರುದ್ಧ ಒಟ್ಟು 32 ಪ್ರಕರಣಗಳನ್ನು ದಾಖಲಿಸಿ, ಅಂದಾಜು ₹ 10,86,59,600 ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ, 78.928 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 59.985 ಕೆಜಿ ಗಾಂಜಾ, 17.918 ಕೆಜಿ ಎಂಡಿಎಂಎ, 1.01 ಗ್ರಾಂ ಹ್ಯಾಶಿಶ್ ಆಯಿಲ್, 0.015 ಗ್ರಾಂ ಆಂಫೆಟಮೈನ್ ಮತ್ತು ಮೆಟಾಕೋಲಿನ್, 150 ಮಾತ್ರೆಗಳು ಹಾಗೂ ನಾನಾ ತರಹದ ಟ್ಯಾಬ್ಲೆಟ್‌ಗಳು ಸೇರಿವೆ” ಎಂದು ಹೇಳಿದ್ದಾರೆ.
ಅಪರಾಧ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ
ರಾಜ್ಯ ರಾಜಧಾನಿ ಬೆಂಗಳೂರಿನ ನಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವೈನ್ ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಡಾಬಾ, ಪಬ್, ಬೇಕರಿ, ಲಾಡ್ಜ್ಗಳ ಬಳಿ ಅಪರಾಧ ಚಟುವಟಿಕೆಗಳು, ಗಲಾಟೆ, ಸುಲಿಗೆ ಹೆಚ್ಚುತ್ತಿರುವುದರ ಹಿನ್ನೆಲೆ ಇದನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಬೆಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
“577 ವೈನ್ ಶಾಪ್ಸ್, 969 ಬಾರ್ ಆ್ಯಂಡ್ ರೆಸ್ಟೋರೆಂಟ್, 704 ಲಾಡ್ಜ್ಗಳು, 1,682 ಬೇಕರಿ, ಪಾನ್ ಶಾಪ್ಗಳ, 715 ಇತರೆ ಜನನಿಬಿಡ ಸ್ಥಳಗಳ ಬಳಿ ಸುಮಾರು 5 ಸಾವಿರಕ್ಕೂ ಅಧಿಕ ಜನರನ್ನು ಹಾಗೂ 4 ಸಾವಿರಕ್ಕೂ ಅಧಿಕ ವಾಹನಗಳನ್ನು ತಪಾಸಣೆ ನಡೆಸಲಾಗಿದೆ” ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
“ಡಿಸೆಂಬರ್ 3 ರಂದು ರಾತ್ರಿ ಬೆಂಗಳೂರಿನ ನಾನಾ ಕಡೆ ಏಕಕಾಲದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ, 247 ರೌಡಿ ಶೀಟರ್‌ಗಳನ್ನು ತನಿಖೆಗೆ ಒಳಪಡಿಸಿದ್ದು, ಐಪಿಸಿ ಕಾಯ್ದೆಗಳಡಿ 5, ಕರ್ನಾಟಕ ಪೊಲೀಸ್ ಕಾಯ್ದೆಯಡಿ 1007 ಹಾಗೂ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆಯಡಿ 2,425 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ಒಬ್ಬನ ಬಳಿ ಮಾರಕಾಸ್ತ್ರವಿರುವುದು ಬೆಳಕಿಗೆ ಬಂದಿದ್ದು, ಆತನ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ” ಎಂದು ಹೇಳಿದ್ದಾರೆ.
“ಮತ್ತೊಂದು ತನಿಖೆಯಲ್ಲಿ, ಸಾರ್ವಜನಿಕ ತೊಂದರೆ ಉಂಟುಮಾಡುವವರ ವಿರುದ್ಧ ನಾಲ್ಕು ಪ್ರಕರಣ ದಾಖಲಿಸಲಾಗಿದೆ. ಸಿಒಟಿಪಿಎ ಕಾಯ್ದೆಯನ್ನು ಉಲ್ಲಂಘಿಸಿದ ಅಂಗಡಿಗಳು/ವ್ಯಕ್ತಿಗಳ ವಿರುದ್ಧ 31 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್‌ನಲ್ಲಿ ಮೂರು ದಿನಗಳ ಹಿಂದೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವೂ ತನಿಖೆಯಿಂದ ಬೆಳಕಿಗೆ ಬಂದಿದ್ದು, ಅಸ್ವಾಭಾವಿಕ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
During today’s weekly press brief, @CPBlr spoke about Bengaluru city police’s special operation across all city division police stations, inspecting wine stores, bars, restaurants, lodges, bakery-tea stalls, individuals & more. During this operation, 247 rowdy sheeters were… pic.twitter.com/X9S96wrLLN
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) December 5, 2023
“ನಗರದ ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸಿದ ಬಸವೇಶ್ವರ ಠಾಣೆ ಪೊಲೀಸರು ಜೂಜಾಡುತ್ತಿದ್ದ ಆರು ಮಂದಿಯನ್ನು ಬಂಧಿಸಿ ₹56,400 ನಗದು ಹಾಗೂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ತಪಾಸಣೆ ನಡೆಸಿದಾಗ, ಐದು ಹಳೆಯ ಗುಂಪುಗಳು ಪತ್ತೆಯಾಗಿವೆ. ಅವರ ವಿರುದ್ಧ ಕೆಪಿ ಕಾಯ್ದೆಯ ಸೆಕ್ಷನ್ 96 (ಬಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಾಲೆಗಳಿಗೆ ಬಾಂಬ್ ಬೆದರಿಕೆ | ಮಾಹಿತಿ ಕೋರಿ ಇಂಟರ್‍ಪೋಲ್‌ಗೆ ಪತ್ರ: ಪೊಲೀಸ್ ಆಯುಕ್ತ ಬಿ. ದಯಾನಂದ
“ನವೆಂಬರ್ 2023 ರಲ್ಲಿ ಒಟ್ಟು 933 ಪ್ರಕರಣಗಳಲ್ಲಿ 20 ಜೀವಾವಧಿ ಶಿಕ್ಷೆ ಪ್ರಕರಣಗಳು ಮತ್ತು 913 ಇತರ ದಂಡ ವಿಧಿಸಿದ ಪ್ರಕರಣಗಳು ಸೇರಿವೆ. ಜೀವಾವಧಿ ಶಿಕ್ಷೆಯು ನಾನಾ ಅಪರಾಧಗಳನ್ನು ಒಳಗೊಂಡಿದೆ, ಅವುಗಳೆಂದರೆ 6 ಪೋಕ್ಸೊ ಪ್ರಕರಣಗಳು, 3 ಕೊಲೆ ಪ್ರಕರಣಗಳು, 304(ಬಿ) ಕಲಂ ಅಡಿಯಲ್ಲಿ ವರದಕ್ಷಿಣೆ ಸಾವಿನ ಪ್ರಕರಣ, 2 ಎನ್‌ಡಿಪಿಎಸ್ ಪ್ರಕರಣಗಳು, ಶಸ್ತ್ರಾಸ್ತ್ರ ಕಾಯ್ದೆಯಡಿ 1 ಪ್ರಕರಣ, ವಿದೇಶಿ ಕಾಯ್ದೆಯಡಿ 1 ಪ್ರಕರಣ, 1 ದರೋಡೆ ಪ್ರಕರಣ ಮತ್ತು 5 ಇತರ ಪ್ರಕರಣಗಳಿವೆ” ಎಂದು ಮಾಹಿತಿ ನೀಡಿದ್ದಾರೆ.