ಬೆಂಗಳೂರಿನಲ್ಲಿ ಮೊಬೈಲ್ ಫೋನ್ ಕಳ್ಳರ ಸಂಖ್ಯೆ ಹೆಚ್ಚಳವಾಗಿದ್ದು, ಪೊಲೀಸರು ಕ್ರಮವಹಿಸಿ ಮೊಬೈಲ್ ಕಳ್ಳರನ್ನು ಬಂಧನ ಮಾಡುತ್ತಿದ್ದಾರೆ. ಇದೀಗ, ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಪೋಸ್ಟ್ ಮೂಲಕ ಹಿಂತಿರುಗಿಸಿದರೆ, ಅಂತಹ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು ಮಾಡದಿರಲು ಬೆಂಗಳೂರು ನಗರ ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು ನಗರ ಪೊಲೀಸರು ಎಷ್ಟೇ ಪ್ರಯತ್ನಿಸಿ ಕ್ರಮ ವಹಿಸಿದರೂ, ಈ ಮೊಬೈಲ್ ಕಳ್ಳತನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಹೀಗಾಗಿ, ಬೆಂಗಳೂರು ನಗರ ಪೊಲೀಸರು ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ದೇಶದಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸರು ಮೊಬೈಲ್ ಕಳ್ಳರಿಗೆ ಒಂದು ಅವಕಾಶ ನೀಡಿದ್ದಾರೆ.
ರಸ್ತೆಯಲ್ಲಿ ಹೋಗುವಾಗ ಅಕಸ್ಮಾತಾಗಿ ಮೊಬೈಲ್ ಸಿಕ್ಕರೆ, ಅಂತಹವರು ಕೂಡ ಪೊಲೀಸ್ ಠಾಣೆಗೆ ಮೊಬೈಲ್ ತಂದು ಕೊಡುವ ಅವಶ್ಯಕತೆ ಇಲ್ಲ. ಬದಲಾಗಿ ಪೋಸ್ಟ್ ಬಾಕ್ಸ್‌ಗೆ ಹಾಕಿದರೆ ಮೊಬೈಲ್‌ಗಳನ್ನು ಪೊಲೀಸರು ಮಾಲೀಕರಿಗೆ ತಲುಪಿಸುತ್ತಾರೆ.
ಇನ್ನು ಕಳ್ಳರು ತಮ್ಮ ತಪ್ಪನ್ನು ಅರಿತು ಕದ್ದ ಮೊಬೈಲ್‌ಗಳನ್ನು ಪೋಸ್ಟ್ ಬಾಕ್ಸ್‌ಗೆ ಹಾಕಬೇಕು. ಪೋಸ್ಟ್ ಬಾಕ್ಸ್ನಲ್ಲಿ ಮೊಬೈಲ್ ಡಂಪ್ ಮಾಡಿದರೆ ಅವರ ವಿರುದ್ಧ ಕೇಸ್ ದಾಖಲಾಗುವುದಿಲ್ಲ. ಇಲ್ಲದಿದ್ದರೆ, ಅಂತಹವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.
ಇನ್ನುಮುಂದೆ ಮೊಬೈಲ್ ಕಳೆದರೆ ಇ-ಲಾಸ್ಟ್ನಲ್ಲಿ, ಎಫ್ಐಆರ್, ಎನ್ಸಿಆರ್ ಮಾಡಿಸುವ ಅವಶ್ಯಕತೆ ಇಲ್ಲ. ಮೊಬೈಲ್ ಕಳೆದುಕೊಂಡವರು ಕಂಟ್ರೊಲ್ ರೂಂಗೆ ತಿಳಿಸಿ ನಂತರ ಕೇಂದ್ರ ಸಲಕರಣೆ ಗುರುತಿನ ನೋಂದಣಿ (Central equipment identity register) ಆ್ಯಪ್ ಮುಖಾಂತರ ಮೊಬೈಲ್ ನಂಬರ್ ಐಎಂಇಐ ನಂಬರ್ ನಮೂದಿಸಬೇಕು.
ಈ ಸುದ್ದಿ ಓದಿದ್ದೀರಾ? ಪೌರಕಾರ್ಮಿಕರಿಗೆ 12% ಬಡ್ಡಿಯೊಂದಿಗೆ ₹90.18 ಕೋಟಿ ಇಪಿಎಫ್ ಪಾವತಿಸುವಂತೆ ಹೈಕೋರ್ಟ್ ಸೂಚನೆ
ಈ ಆ್ಯಪ್ ಮುಖಾಂತರ ಪೊಲೀಸರು ಆದಷ್ಟು ಬೇಗ ಕಳೆದು ಹೋದ ಮೊಬೈಲ್ ಅನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡಲಿದ್ದಾರೆ.
ಮೊದಲಿಗೆ ಕಮಾಂಡ್ ಸೆಂಟರ್ ಬಳಿ ಪೋಸ್ಟ್ ಬಾಕ್ಸ್ ಇಡಲು ಪೊಲೀಸರು ನಿರ್ಧಾರ ಮಾಡಿದ್ದಾರೆ. ಇನ್ನೆರಡು ದಿನದಲ್ಲಿ ಪೊಲೀಸರು ಸಿಇಐಆರ್ ಲಾಂಚ್ ಮಾಡಲಿದ್ದಾರೆ.