ಸದಾ ಜನರಿಂದ ತುಂಬಿರುವ ರಾಜಧಾನಿ ಬೆಂಗಳೂರಿನ ಪ್ರಮುಖ ಸ್ಥಳವಾದ ಚರ್ಚ್ ಸ್ಟ್ರೀಟ್‌ನಲ್ಲಿ ಇನ್ನುಮುಂದೆ ಚಲನಚಿತ್ರ ಚಿತ್ರೀಕರಣ ಮಾಡುವಂತಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿಳಿಸಿದೆ.
ವಿಶೇಷವಾಗಿ ವಾರಾಂತ್ಯದಲ್ಲಿ ಪಾರ್ಟಿಗೆ ಹೋಗುವವರಿಗೆ ಮತ್ತು ಖರೀದಿದಾರರಿಗೆ ಚರ್ಚ್‌ಸ್ಟ್ರೀಟ್ ಬೆಂಗಳೂರಿನ ಪ್ರಮುಖ ಆಕರ್ಷಣೆಯಾಗಿದೆ. ಚರ್ಚ್‌ಸ್ಟ್ರೀಟ್‌ನಲ್ಲಿ ಚಿತ್ರೀಕರಣ ಮಾಡುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಅಲ್ಲದೇ, ಜನನಿಬಿಡ ಪ್ರದೇಶವಾದ ಇಲ್ಲಿ ಚಿತ್ರೀಕರಣ ನಡೆಸುವುದರಿಂದ ಇನ್ನು ಹೆಚ್ಚಿನ ಜನದಟ್ಟಣೆ ಉಂಟಾಗುತ್ತದೆ ಎಂದು ಕಾರಣ ನೀಡಿ ಪಾಲಿಕೆ ಈ ಆದೇಶ ಹೊರಡಿಸಿದೆ.
ಕಳೆದ ಭಾನುವಾರ ಚರ್ಚ್‌ಸ್ಟ್ರೀಟ್‌ನಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ, ಸಂಚಾರ ದಟ್ಟಣೆ ಉಂಟಾಗಿತ್ತು. ಇದನ್ನು ಗಮನಿಸಿದ ಬಿಬಿಎಂಪಿ ಅಧಿಕಾರಿಗಳು ಚರ್ಚ್‌ಸ್ಟ್ರೀಟ್‌ನಲ್ಲಿ ಸಿನಿಮಾ ಚಿತ್ರೀಕರಣ ಮಾಡುವಂತಿಲ್ಲ ಎಂದು ಈ ಆದೇಶ ಹೊರಡಿಸಿದ್ದಾರೆ.
ಅಲ್ಲದೇ, ಈ ಸ್ಥಳದಲ್ಲಿ ಸೂಕ್ತ ಅನುಮತಿ ಪಡೆಯದೆ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ, ಚಿತ್ರತಂಡ ಪೊಲೀಸರಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳಿತ್ತು.
ಆದರೆ, ಪೊಲೀಸರು ಶೂಟಿಂಗ್‌ಗೆ ಅನುಮತಿ ನೀಡಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅನುಮತಿ ಪಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಕೆಎಫ್‌ಸಿಸಿ ಕೂಡ ಸ್ಪಷ್ಟನೆ ನೀಡಿದ್ದು, ಯಾವುದೇ ಅನುಮತಿ ನೀಡಿಲ್ಲ ಎಂದು ಹೇಳಲಾಗಿದೆ.
ಪಾದಚಾರಿ ಮಾರ್ಗದಲ್ಲಿ ಶೂಟಿಂಗ್ ನಡೆಯುತ್ತಿದ್ದು, ನೂರಾರು ಮಂದಿ ಶೂಟಿಂಗ್ ನೋಡಲು ನಿಂತಿದ್ದರು. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು.
“ಚರ್ಚಸ್ಟ್ರೀಟ್‌ನಲ್ಲಿ ಸಿನಿಮಾ ಶೂಟಿಂಗ್ ನಡೆಸಲು ನಾವು ಅನುಮತಿ ನೀಡಿಲ್ಲ. ಬಹುತೇಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅನುಮತಿ ಪಡೆದಿರಬಹುದು” ಎಂದು ಕೇಂದ್ರೀಯ ಡಿಸಿಪಿ ಶೇಖರ್ ಎಚ್.ತೆಕ್ಕನವರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾತೃಭಾಷೆ ಕಡ್ಡಾಯವಾಗಬೇಕೆಂಬ ಕುವೆಂಪು ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ: ನ್ಯಾ. ಎನ್ ವಿ ಅಂಜಾರಿಯ
”ಚರ್ಚ್‌ಸ್ಟ್ರೀಟ್‌ನಲ್ಲಿ ಸಿನಿಮಾ ಶೂಟಿಂಗ್ ನಡೆಸಲು ಅನುಮತಿ ನೀಡುವುದಕ್ಕೆ ನಮಗೆ ಯಾವುದೇ ಅಧಿಕಾರವಿಲ್ಲ” ಎಂದು ಕೆಎಫ್‌ಸಿಸಿ ಅಧ್ಯಕ್ಷ ಎನ್.ಎಂ.ಸುರೇಶ್ ಸ್ಪಷ್ಟಪಡಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾತನಾಡಿ, ”ಚರ್ಚ್ ಸ್ಟ್ರೀಟ್‌ನಲ್ಲಿ ಚಲನಚಿತ್ರಗಳ ಚಿತ್ರೀಕರಣವನ್ನು ನಿರ್ಬಂಧಿಸಲಾಗಿದೆ. ಅದೊಂದು ಜನನಿಬಿಡ ರಸ್ತೆ. ಸಿನಿಮಾ ಚಿತ್ರೀಕರಣ ಸಂಚಾರಕ್ಕೆ ಅಡ್ಡಿಯಾಗಲಿದೆ. ಚಿತ್ರೀಕರಣಕ್ಕೆ ಪೊಲೀಸರು ಅಥವಾ ಕೆಎಫ್‌ಸಿಸಿ ಅನುಮತಿ ನೀಡಲು ಸಾಧ್ಯವಿಲ್ಲ” ಎಂದಿದ್ದಾರೆ.