ಮನೆ ಮಾರಾಟ ಮಾಡಲು ಹೊರಟಿರುವ ಮಹಿಳೆಯೊಬ್ಬರ ಆಸ್ತಿ ದಾಖಲೆ ಪತ್ರಗಳನ್ನು ನಕಲು ಮಾಡಿ ಬೆಂಗಳೂರಿನ ಮೂರು ಬ್ಯಾಂಕ್‌ಗಳಲ್ಲಿ ಬರೋಬ್ಬರಿ ₹3.85 ಕೋಟಿ ಸಾಲ ಪಡೆದು ವಂಚಿಸಿದ್ದ ಐವರು ಆರೋಪಿಗಳ ಪೈಕಿ ಚಲನಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಪುತ್ರ ಅಭಿಲಾಷ್ ಅವರ ಒಡೆತನದ ಕಂಪೆನಿಯೊಂದಕ್ಕೆ ಹಣ ವರ್ಗಾವಣೆಯಾಗಿರುವುದು ಸಿಸಿಬಿ ತನಿಖೆಯಲ್ಲಿ ತಿಳಿದು ಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಂಬುಜಾಕ್ಷಿ ಅವರ ಜಮೀನಿನ ದಾಖಲೆಗಳನ್ನು ನಕಲು ಮಾಡಿ 3 ಬ್ಯಾಂಕ್‍ಗಳಿಂದ ಸುಮಾರು ₹3.85 ಕೋಟಿಗೂ ಅಧಿಕ ಸಾಲ ಪಡೆದು ವಂಚಿಸಿದ್ದ ಆರೋಪದಡಿ ಭಾಸ್ಕರ್, ಮಹೇಶ, ಅಭಿಷೇಕ್ ಗೌಡ, ಡಿ.ಆರ್ ಅರುಣ್, ಟಿ.ಪಿ ಶಿವಕುಮಾರ್ ಎಂಬುವರನ್ನು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.
ಆರೋಪಿಗಳ ವಿಚಾರಣೆ ವೇಳೆ ರಾಕ್‌ಲೈನ್ ವೆಂಕಟೇಶ್ ಪುತ್ರ ಅಭಿಲಾಷ್ ಹೆಸರು ಹೊರಬಂದಿತ್ತು. ಆತನ ಕಂಪನಿಗೆ ಹಣ ಸಂದಾಯವಾದ ಮಾಹಿತಿ ವಿಚಾರಣೆಯಲ್ಲಿ ತಿಳಿದು ಬಂದಿತ್ತು. ₹1.2 ಕೋಟಿ ಹಣ ಸಂದಾಯ ಮಾಡಿದ್ದು ₹25 ಲಕ್ಷ ಕಮಿಷನ್ ಸಿಕ್ಕಿದೆ ಎನ್ನಲಾಗಿತ್ತು.
ಆರೋಪಿಗಳ ಹೇಳಿಕೆ ಬೆನ್ನಲ್ಲೇ ಅಭಿಲಾಷ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ‘ಮೋಸದ ಬಗ್ಗೆ ತಿಳಿಯದೆ ಹಣ ಪಡೆದಿದ್ದೆ. ನಾನು ಯಾವುದೇ ಮೋಸ ಮಾಡಿಲ್ಲ’ ಎಂದು ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಮತ್ತೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ಅಂಬುಜಾಕ್ಷಿ ನಾಗರಕಟ್ಟಿ (75) ಎಂಬುವವರು ಬೆಂಗಳೂರಿನ ಜೆ.ಪಿ.ನಗರದ 6ನೇ ಹಂತದ ನಿವಾಸಿ. ಇವರು ತಮ್ಮ 1,350 ಚದರ ಅಡಿಯ ನಿವೇಶನವನ್ನು ಮಾರಾಟ ಮಾಡಿ ತಮ್ಮ ಮಗನ ಜತೆಗೆ ವಿದೇಶದಲ್ಲಿ ವಾಸ ಮಾಡಲು ನಿರ್ಧಾರ ಮಾಡಿದ್ದರು. ಈ ಹಿನ್ನೆಲೆ, ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸವನ್ನು ಮಾರಾಟ ಮಾಡಲು ನಿರ್ಧಾರ ಮಾಡಿ, ಈ ಬಗ್ಗೆ ತಮ್ಮ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು.
ಈ ಸಂಬಂಧ ತಮ್ಮ ಮನೆ ಮಾರಾಟ ಮಾಡುವ ವಿಚಾರವನ್ನು ರಿಯಲ್ ಎಸ್ಟೇಟ್ ಬ್ರೋಕರ್‌ಗಳಾಗಿದ್ದ ಆರೋಪಿಗಳಿಗೆ ತಿಳಿಸಿದ್ದರು. ಇದೇ ನೆಪದಲ್ಲಿ ಅಂಬುಜಾಕ್ಷಿಯವರ ನಿವೇಶನದ ದಾಖಲೆಗಳನ್ನು ಪಡೆದುಕೊಂಡಿದ್ದ ಆರೋಪಿಗಳು, ಅಸಲಿ ದಾಖಲೆಗಳ ರೀತಿಯಲ್ಲೇ ನಿವೇಶನಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವರ ಸಹಿ ಫೋರ್ಜರಿ ಮಾಡಿ, 3 ಬ್ಯಾಂಕ್‍ಗಳಿಗೆ ನೀಡಿ, ₹3.85 ಕೋಟಿ ಸಾಲ ಪಡೆದುಕೊಂಡಿದ್ದರು.
ಮತ್ತೆ ಕೆಲವು ದಿನಗಳ ನಂತರ, ಕೃಷ್ಣ ತನ್ನ ಸ್ನೇಹಿತ ಮಹೇಶ ಹಾಗೂ ಇತರ ಸ್ನೇಹಿತರೊಂದಿಗೆ ಬ್ಯಾಂಕ್ ಅಧಿಕಾರಿಗಳಂತೆ ಅಂಬುಜಾಕ್ಷಿಯವರ ಮನೆಗೆ ತೆರಳಿದ್ದಾರೆ. ಈ ವೇಳೆ, ಕೃಷ್ಣ ತನಗೆ ಸಾಲ ಬೇಕಿದ್ದು, ಹಾಗಾಗಿ ಅಂಬುಜಾಕ್ಷಿ ಅವರ ಸಹಿ ಬೇಕು ಎಂದು ತಿಳಿಸಿದ್ದಾನೆ. ಈ ಹಿಂದೆ ಬ್ಯಾಂಕ್ ಉದ್ಯೋಗಿಯಾಗಿದ್ದ ಅಂಬುಜಾಕ್ಷಿ ಆತನ ಉದ್ದೇಶವನ್ನು ಅರಿತು ಪ್ರಶ್ನೆ ಮಾಡಿದ್ದಾಳೆ. ಬಳಿಕ, ತನ್ನ ಆಸ್ತಿಯನ್ನು ಆತನಿಗೆ ಮಾರಲು ನಿರಾಕರಿಸಿದ್ದಾಳೆ.
ಸಾಲದ ವಿಚಾರವಾಗಿ ಬ್ಯಾಂಕ್ ಸಿಬ್ಬಂದಿ ಅಂಬುಜಾಕ್ಷಿಯವರನ್ನು ಸಂಪರ್ಕಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಳೆ ವೈಷಮ್ಯ: ಸಚಿವರ ಮನೆ ಸಮೀಪ ರೌಡಿಶೀಟರ್ ಬರ್ಬರ ಹತ್ಯೆ
ನಂತರ ಅಂಬುಜಾಕ್ಷಿ ಅವರ ಹೆಸರಿನಲ್ಲಿ ಈಗಾಗಲೇ ಮೂರು ಬ್ಯಾಂಕ್‌ಗಳಲ್ಲಿ ₹3.85 ಕೋಟಿ ಸಾಲ ಪಡೆದಿರುವ ಬಗ್ಗೆ ತಿಳಿದುಬಂದಿದೆ. ಆರೋಪಿಗಳು ಬ್ಯಾಂಕ್‌ಗಳಿಂದಲೂ ಹಣ ಡ್ರಾ ಮಾಡಿಕೊಂಡಿದ್ದರು.
ಅಂಬುಜಾಕ್ಷಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಮತ್ತಿಬ್ಬರು ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.