ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇವೆ. ಜತೆಗೆ, ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿ ಮಾಡದೇ ಹಲವು ವಾಹನ ಮಾಲೀಕರು ಸುತ್ತಾಡುತ್ತಿದ್ದಾರೆ. ಇದೀಗ, ಅವರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಬೆಂಗಳೂರು ಸಂಚಾರ ಪೊಲೀಸರು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ.
ಹೌದು, ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮನೆಗೆ ಇಷ್ಟು ದಿನ ಸಂಚಾರ ಪೊಲೀಸರು ತೆರಳಿ ದಂಡ ಪಾವತಿ ಮಾಡಿಸಿಕೊಳ್ಳುತ್ತಿದ್ದರು. ಇಲ್ಲವೇ ನೋಟಿಸ್ ನೀಡುತ್ತಿದ್ದರು. ಇನ್ನು ಮುಂದೆ ನೋಟಿಸ್ ಜತೆಗೆ ಕ್ಯೂ ಆರ್ ಕೋಡ್ ಕೂಡ ಮನೆ ಬಾಗಿಲಿಗೆ ಬರಲಿದೆ.
ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಸಂಪರ್ಕ ರಹಿತ ನಿಯಮ ಜಾರಿಯಡಿಯಲ್ಲಿ ದಾಖಲು ಮಾಡುವ ನಿಯಮ ಉಲ್ಲಂಘನಾ ಪ್ರಕರಣಗಳಿಗೆ ಆಟೋಮೇಷನ್ ಸೆಂಟರ್ ವಿಭಾಗದಿಂದ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಮಾಲೀಕರಿಗೆ, ಕಲಂ 133 ಮೋಟಾರು ವಾಹನ ಕಾಯ್ದೆ ರೀತ್ಯಾ ನೊಟೀಸ್ ಮುದ್ರಿಸಿ ಅಂಚೆ ಮುಖಾಂತರ ಕಳುಹಿಸಲಾಗುತ್ತಿದೆ.
ಮಾರ್ಚ್ 1 ರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಮಾಲೀಕರಿಗೆ ಕಳುಹಿಸುವ 133 ನೋಟೀಸ್‌ನ ಬಲಭಾಗದಲ್ಲಿ ಕ್ಯೂ ಆರ್ ಕೋಡನ್ನು ಸಹ ಮುದ್ರಿಸಿ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಕ್ಯೂಆರ್ ಕೋಡ್ ಮುಖಾಂತರ ನಿಯಮ ಉಲ್ಲಂಘನೆಯ ವಿಧ. ಉಲ್ಲಂಘನೆಯ ಸ್ಥಳ, ದಿನಾಂಕ, ಸಮಯ, ದಂಡದ ಮೊತ್ತದ ವಿವರಗಳ ಜತೆಗೆ ಬಹು ಮುಖ್ಯವಾಗಿ ಉಲ್ಲಂಘನೆಯ ಸಾಕ್ಷ್ಯಾಧಾರಿತ ಛಾಯಾಚಿತ್ರವನ್ನೂ ಸಹಾ ನೋಡಬಹುದಾಗಿದೆ.
Bengaluru Traffic Police is stepping up its enforcement game! Starting 01/03/2024, notices sent to violators will include a QR code for detailed info on traffic violations committed. Let’s drive responsibly!#DriveResponsibly
ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ನಿಯಮಗಳನ್ನು… pic.twitter.com/mIcl8x9FVL
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) March 1, 2024
ಉಲ್ಲಂಘನೆಯ ದಂಡದ ಮೊತ್ತವನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಸಾರ್ವಜನಿಕರಿಗೆ ಅನುವು ಮಾಡಿಕೊಡಲು ಆದೇ ಕ್ಯೂ ಆರ್ ಕೋಡ್‌ನಲ್ಲಿ ಪಾವತಿಯ ಲಿಂಕನ್ನೂ ಸಹ ಒದಗಿಸಲಾಗಿದೆ.
“ನಿಯಮ ಉಲ್ಲಂಘನೆಗಳಿಗೆ ಸಂಬಂಧಪಟ್ಟ ಯಾವುದೇ ಬಗ್ಗೆ ದೂರು/ವಿವಾದಗಳಿದ್ದಲ್ಲಿ btp.gov.inಗೆ ಲಾಗಿನ್ ಆಗುವ ಮೂಲಕ ಅಥವಾ ಕೆಎಸ್‌ಪಿ ಆಪ್ ಅನ್ನು ಪ್ಲೇಸ್ಟೋರ್‌ನಿಂದ ಡೌನ್ ಲೋಡ್ ಮಾಡಿಕೊಂಡು, ಉಲ್ಲಂಘನೆಯ ವಿವರಗಳನ್ನು ವೀಕ್ಷಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಅಥವಾ ದಂಡ ಪಾವತಿಸಬಹುದಾಗಿದೆ” ಎಂದು ಹೇಳಿದೆ.
“2021ರ ನಂತರದ ನಿಯಮ ಉಲ್ಲಂಘನೆಗಳಿಗೆ ಮಾತ್ರ ಸಾಕ್ಷ್ಯಾಧಾರಿತ ಛಾಯಾಚಿತ್ರಗಳು ಲಭ್ಯವಿದೆ” ಎಂದು ತಿಳಿಸಿದೆ.