“ರಾಜ್ಯ ರಾಜಧಾನಿ ಬೆಂಗಳೂರಿನ ಟ್ರಿನಿಟಿ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಫೆಬ್ರವರಿ 11ರಂದು ನಮ್ಮ ಮೆಟ್ರೋ ಸಂಚಾರ ಭಾಗಶಃ ಸ್ಥಗಿತವಾಗಲಿದೆ” ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹೇಳಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ”ಭಾನುವಾರ ಟ್ರಿನಿಟಿ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ನೇರಳೆ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದೆ.
”ಈ ಕಾಮಗಾರಿಯನ್ನು ನಿರ್ವಹಿಸಲು ನೇರಳೆ ಮಾರ್ಗದ ಎಂ.ಜಿ. ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ನಮ್ಮ ಮೆಟ್ರೋ ಸಂಚಾರ ಸೇವೆಯನ್ನು ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ (ಎರಡು ಗಂಟೆಗಳ ಅವಧಿಗೆ) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ರೈಲುಗಳು ಎಂ.ಜಿ ರಸ್ತೆ ಮತ್ತು ಚಲ್ಲಘಟ್ಟ ಹಾಗೂ ಇಂದಿರಾನಗರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಮಾತ್ರ ಬೆಳಗ್ಗೆ 7 ಗಂಟೆಯಿಂದ ಚಲಿಸುತ್ತವೆ” ಎಂದು ಮಾಹಿತಿ ನೀಡಿದೆ.
”ಬೆಳಗ್ಗೆ 9 ಗಂಟೆಯ ನಂತರ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ವೇಳಾಪಟ್ಟಿಯಂತೆ ಮೆಟ್ರೋ ರೈಲು ಸೇವೆಗಳು ಲಭ್ಯವಿರುತ್ತವೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಕೆಐಎ | 3 ಪ್ರತ್ಯೇಕ ಪ್ರಕರಣಗಳಲ್ಲಿ ₹6.8 ಕೋಟಿ ಮೌಲ್ಯದ 9.3 ಕೆಜಿ ಚಿನ್ನ ವಶ; 6 ಮಂದಿ ಬಂಧನ
ಹಸಿರು ಮಾರ್ಗದಲ್ಲಿ ರೈಲುಗಳ ಸೇವೆ ಆಯಾ ಟರ್ಮಿನಲ್ ನಿಲ್ದಾಣಗಳಿಂದ ವೇಳಾಪಟ್ಟಿಯ ಪ್ರಕಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ ಎಂದಿನಂತೆ ಚಲಿಸುತ್ತವೆ. ನಮ್ಮ ಮೆಟ್ರೋ ಪ್ರಯಾಣಿಕರು ಬದಲಾವಣೆಯನ್ನು ಗಮನಿಸಲು ಕೋರಿದೆ. ಜತೆಗೆ ಸಾರ್ವಜನಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸಿದೆ.