“ಮಾರ್ಚ್ 10ರಂದು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ಬೆಳಗ್ಗೆ 7ರ ಬದಲಾಗಿ 6 ಗಂಟೆಗೆ ಪ್ರಾರಂಭಿಸಲಾಗುವುದು” ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.
“ಕರ್ನಾಟಕ ಪೊಲೀಸ್ ವತಿಯಿಂದ ರಾಜ್ಯ ಮಟ್ಟದ 10 ಕಿಲೋ ಮೀಟರ್ ಮತ್ತು 5 ಕಿ.ಮೀ ಓಟದ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸುಗಮವಾಗಿ ಭಾಗವಹಿಸಲು ಬಿಎಂಆರ್‌ಸಿಎಲ್ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ಎಲ್ಲ ನಾಲ್ಕು ಟರ್ಮಿನಲ್‌ಗಳಿಂದ ಮಾರ್ಚ್ 10 (ಭಾನುವಾರ)ರಂದು ಬೆಳಗ್ಗೆ 7ರ ಬದಲಾಗಿ 6 ಗಂಟೆಗೆ ಪ್ರಾರಂಭಿಸಲಿದೆ” ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ರಾಜ್ಯ ಮಟ್ಟದ 10 ಕಿ.ಮೀ ಮತ್ತು 5 ಕಿ.ಮೀ ಓಟದ ಸ್ಪರ್ಧೆ
ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದಲ್ಲಿ ಮಾ.10೦ರಂದು 5 ಹಾಗೂ 10 ಕಿ.ಮೀ ಓಟದ ಸ್ಪರ್ಧೆ ಆಯೋಜಿಸಿದೆ.
ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುವರ್ಣ ಮಹೋತ್ಸವದ ಲೋಗೋ ಮತ್ತು ಟೀ ಶರ್ಟ್ ಅನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಬಿಡುಗಡೆಗೊಳಿಸಿ ಮಾತನಾಡಿದರು, “ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಮಟ್ಟದಲ್ಲಿ ಫಿಟ್‌ನೆಸ್ ಫಾರ್ ಆಲ್ ಎಂಬ ಶೀರ್ಷಿಕೆಯಡಿ ಈ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಓಟದ ಮುಖಾಂತರ ಮಾದಕ ವಸ್ತು ಮುಕ್ತ ಕರ್ನಾಟಕ, ಸೈಬರ್ ಕ್ರೈಂ ಮತ್ತು ಹಸಿರು ಬೆಂಗಳೂರು ಎಂಬ ನಾಲ್ಕು ಮಾದರಿಯಲ್ಲಿ ಜಾಗೃತಿ ಮೂಡಿಸಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರ: ಶೌಚಕ್ಕೂ ನೀರಿಲ್ಲದೆ ಮಾಲ್ ಕಡೆ ಮುಖ ಮಾಡಿದ ಜನ
ಬಹುಮಾನ
“ಮಾ.10 ರಂದು ವಿಧಾನಸೌಧದ ಎದುರು ಓಟ ಪ್ರಾರಂಭವಾಗಲಿದ್ದು, ಕಬ್ಬನ್‌ಪಾರ್ಕ್ ಮುಖಾಂತರ ಸಾಗಿ ವಿಧಾನಸೌಧದ ಎದುರೇ ಮುಕ್ತಾಯಗೊಳ್ಳಲಿದೆ. ಪೊಲೀಸ್, ಪಬ್ಲಿಕ್ ಹಾಗೂ ಎಸ್‌ಬಿಐ ಎಂಬ ಮೂರು ವಿಭಾಗಗಳಲ್ಲಿ 5 ಕಿ.ಮೀ. ಮತ್ತು 10 ಕಿ.ಮೀ. ಓಟ ನಡೆಯಲಿದೆ. ಪ್ರಥಮ ಬಹುಮಾನ ₹1 ಲಕ್ಷ ಮತ್ತು 5 ಕಿ.ಮೀ. ಓಟದಲ್ಲಿ ಪ್ರಥಮ ಬಹುಮಾನ ₹40 ಸಾವಿರ ನೀಡಲಾಗುತ್ತದೆ. ಮೂರು ವಿಭಾಗಗಳಲ್ಲಿ ಪುರುಷರು ಮತ್ತು ಮಹಿಳಾ ವಿಜೇತರಿಗೆ ಪ್ರತ್ಯೇಕವಾಗಿ ನಗದು ಬಹುಮಾನ ನೀಡಲಾಗುತ್ತದೆ. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೂ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು” ಎಂದು ತಿಳಿಸಿದರು.