ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉಂಟಾಗುವ ವಾಹನ ಸಂಚಾರ ದಟ್ಟಣೆ ಸಮಸ್ಯೆ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ. ನಗರದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟ್ರಾಫಿಕ್ ಜಾಮ್‌ನಿಂದ ಜನರ ಸಮಯ ಹಾಗೂ ವಾಹನಗಳ ಇಂಧನ ಬಹಳಷ್ಟು ಪ್ರಮಾಣದಲ್ಲಿ ವ್ಯರ್ಥವಾಗುತ್ತಿದೆ. ಸದ್ಯ ಈ ಸಮಸ್ಯೆಗೆ ಒಂದು ರೀತಿಯಲ್ಲಿ ನಮ್ಮ ಮೆಟ್ರೋ ಪರಿಹಾರ ನೀಡಿದೆ.
ಮೆಟ್ರೋದಲ್ಲಿ ನಿತ್ಯ 7 ಲಕ್ಷ ಜನ ಸಂಚರಿಸಿದರೂ ಕೂಡ ನಗರದಲ್ಲಿ ಇನ್ನು ವಾಹನ ಸಂಚಾರ ದಟ್ಟಣೆ ಇದೆ. ಮಳೆ ಬಂದಾಗ ವಾಹನ ಸವಾರರು ರಸ್ತೆಯಲ್ಲಿಯೇ 2 ಗಂಟೆಗಳ ಕಾಯಬೇಕು. ಅಷ್ಟರ ಮಟ್ಟಿಗೆ ಸಂಚಾರ ದಟ್ಟಣೆ ಉಂಟಾಗಿರುತ್ತದೆ. ಇನ್ನು ನಮ್ಮ ಮೆಟ್ರೋ ಸೇವೆ ನಗರದಲ್ಲಿ ಇಲ್ಲದೇ ಇದ್ದರೇ, ಬೆಂಗಳೂರಿನ ನಾಗರಿಕರು ನಗರದಲ್ಲಿ ವಾಸಿಸುವುದೇ ಕಷ್ಟಕರವಾಗಬಹುದಿತ್ತು ಎಂದರೇ ತಪ್ಪಾಗಲಾರದು. ಸದ್ಯ ಮೆಟ್ರೋ ಶುಕ್ರವಾರ ತನ್ನ 13ನೇ ವಸಂತಕ್ಕೆ ಕಾಲಿಟ್ಟಿದೆ.
ಮೊದಲಿಗೆ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ತನ್ನ ಸೇವೆ ಆರಂಭ ಮಾಡಿದ ನಮ್ಮ ಮೆಟ್ರೋ ಇದೀಗ ಒಟ್ಟಾರೆಯಾಗಿ 73.81ಕಿ.ಮೀ ವರೆಗೂ ವ್ಯಾಪಿಸಿದೆ. ಕಳೆದ ಒಂದು ತಿಂಗಳ ಹಿಂದೆ ನೇರಳೆ ಮಾರ್ಗ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಈ ಮಾರ್ಗದಲ್ಲಿ ನಿತ್ಯ 80 ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ.
“ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ ಪ್ರತಿದಿನ 7 ಲಕ್ಷ ದಾಟುತ್ತದೆ. ಅಕ್ಟೋಬರ್ 13 ರಂದು 7.5 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ” ಎಂದು ಬಿಎಂಆರ್‌ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ(ಕಾರ್ಯಾಚರಣೆಗಳು ಮತ್ತು ನಿರ್ವಹಣೆ) ಎ ಎಸ್ ಶಂಕರ್ ಹೇಳಿದರು.
“ಈ ವರ್ಷ ಹಬ್ಬದ ಸೀಸನ್ ಮುಗಿದು ಮತ್ತೆ ಎಲ್ಲ ಐಟಿ ಕಂಪನಿಗಳು ಕಚೇರಿಯಿಂದ ಕೆಲಸ ಮಾಡಲು ಉದ್ಯೋಗಿಗಳಿಗೆ ಹೇಳಿದಾಗ ಮೆಟ್ರೋ ಪ್ರಯಾಣಿಕರ ಸಂಖ್ಯೆ 8.5 ಲಕ್ಷ ಮುಟ್ಟುವ ನಿರೀಕ್ಷೆಯಿದೆ. ಇದು ಜನವರಿ ಮತ್ತು ಮಾರ್ಚ್ 2024 ರ ನಡುವೆ ಯಾವುದೇ ಸಮಯದಲ್ಲಿ ಸಂಭವಿಸಬಹುದು” ಎಂದರು.
“ಕೆ.ಆರ್.ಪುರಕ್ಕೆ ಸಂಪರ್ಕ ಕಲ್ಪಿಸಿದ ನಂತರ ನಿತ್ಯ 75,000 ಪ್ರಯಾಣಿಕರು ಸಂಚರಿಸಬಹುದು ಎಂದು ಊಹಿಸಲಾಗಿತ್ತು. ಆದರೆ, ಈಗ 80,000 ಜನರು ನಿತ್ಯ ಪ್ರಯಾಣ ಮಾಡುತ್ತಾರೆ. ಆರ್.ವಿ.ರಸ್ತೆ – ಬೊಮ್ಮಸಂದ್ರ ಮಾರ್ಗ (ಹಳದಿ ಮಾರ್ಗ) ಕಾರ್ಯಾರಂಭಗೊಂಡರೆ, ಪ್ರಯಾಣಿಕರ ಸಂಖ್ಯೆ ಇನ್ನು 1.5 ರಿಂದ 2 ಲಕ್ಷದಷ್ಟು ಹೆಚ್ಚಾಗುತ್ತದೆ. ಆ ವೇಳೆಗೆ ಸುಲಭವಾಗಿ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಲಿದೆ” ಎಂದು ಅವರು ಹೇಳಿದರು.
“ಮೆಟ್ರೋ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 94 ಪ್ರಯಾಣಿಕರು ಸಂಚರಿಸಿದ್ದಾರೆ. ಮೆಟ್ರೋ ಕಾರ್ಯಾಚರಣೆಯಿಂದ ಬಿಎಂಆರ್‌ಸಿಎಲ್ ತಿಂಗಳಿಗೆ ₹4 ಕೋಟಿ ಲಾಭ ಪಡೆಯುತ್ತದೆ. ತಿಂಗಳಿಗೆ ₹50 ಕೋಟಿ ಆದಾಯವಿದೆ. ಹೆಚ್ಚುವರಿ ಸಂಬಳ, ಯುಟಿಲಿಟಿ ಬಿಲ್ ಹಾಗೂ ಕಾರ್ಯಾಚರಣೆಯ ವೆಚ್ಚಗಳು ಸೇರಿದಂತೆ ತಿಂಗಳಿಗೆ ₹46 ಕೋಟಿ ಖರ್ಚಾಗುತ್ತದೆ” ಎಂದು ಅವರು ಹೇಳಿದರು.
“ಸದ್ಯ ಮೊಬೈಲ್ ಮೂಲಕ ಖರೀದಿಸಬಹುದಾದ ಕ್ಯೂಆರ್ ಟಿಕೆಟ್ ಒಬ್ಬ ಪ್ರಯಾಣಿಕರಿಗೆ ಮಾತ್ರ ಅನುವು ಮಾಡಿಕೊಡುತ್ತದೆ. ಶೀಘ್ರದಲ್ಲಿಯೇ ಒಂದು ಟಿಕೆಟ್ ಅನ್ನು ಆರು ಜನರು ಬಳಸುವ ವ್ಯವಸ್ಥೆಗೆ ಚಾಲನೆ ನೀಡಲಾಗುವುದು. ಇದು ಸಾರ್ವಜನಿಕ ಬೇಡಿಕೆಯನ್ನು ಆಧರಿಸಿದೆ. ಕುಟುಂಬಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಂಗಳೂರು ಮೆಟ್ರೋ ತರಬೇತಿ ಪಡೆಯುತ್ತಿರುವ 96 ಹೊಸ ರೈಲು ನಿರ್ವಾಹಕರನ್ನು ನೇಮಿಸಿಕೊಂಡಿದೆ” ಎಂದು ಅವರು ಹೇಳಿದರು.
“ಫೆಬ್ರವರಿ 2024ರಲ್ಲಿ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಬಹುದು” ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಐವರು ಆರೋಪಿಗಳ ಬಂಧಿನದಿಂದ 8 ಪ್ರಕರಣ ಭೇದಿಸಿದ ಪೊಲೀಸರು
ಪ್ರಸ್ತುತ ನಮ್ಮ ಮೆಟ್ರೋದಲ್ಲಿ 52 ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ 30 ನೇರಳೆ ಮಾರ್ಗದಲ್ಲಿ (ಶೇಕಡಾ 99.35 ರ ಸಮಯಪಾಲನೆ ದಾಖಲೆ), ಹಸಿರು ಮಾರ್ಗದಲ್ಲಿ 22 ರೈಲುಗಳು (ಶೇ.99.28 ಸಮಯಪಾಲನೆ ದಾಖಲೆ) ಕಾರ್ಯಾಚರಣೆ ನಡೆಸುತ್ತಿವೆ.