ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆರ್.ವಿ.ರಸ್ತೆ – ಬೊಮ್ಮಸಂದ್ರ ಹಳದಿ ಮಾರ್ಗದ ನಮ್ಮ ಮೆಟ್ರೋ ಫೆಬ್ರುವರಿ 2024ಕ್ಕೆ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಲಾಗಿತ್ತು. ಇದೀಗ, ನಿಗದಿತ ಗಡುವಿಗಿಂತಲೂ ತಡವಾಗಿ ಕಾರ್ಯಾಚರಣೆ ಆರಂಭವಾಗುವ ಮುನ್ಸೂಚನೆಯಿದೆ.
ಮುಂದಿನ ಲೋಕಸಭಾ ಚುನಾವಣೆಯ ನಂತರವೇ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ದಕ್ಷಿಣ ಬೆಂಗಳೂರಿನ ಇತರ ಭಾಗಗಳ ನಡುವೆ ನಮ್ಮ ಮೆಟ್ರೋ ಸಂಪರ್ಕ ಪಡೆಯಲಿದೆ.
“ಹಳದಿ ಮಾರ್ಗದ ಮೂಲ ಮಾದರಿಯ ರೈಲು ಗುರುವಾರ ಚೀನಾದಿಂದ ರವಾನೆಯಾಗಲಿದ್ದು, ಜನವರಿಯಲ್ಲಿ ಬೆಂಗಳೂರು ತಲುಪಲಿದೆ. ಆರು ಬೋಗಿಗಳ ರೈಲು ಜೋಡಿಯ ಸಾಗಣೆಗೆ ಎಲ್ಲ ಅಡೆತಡೆಗಳನ್ನು ತೆರವುಗೊಳಿಸಲಾಗಿದೆ” ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಮಾದರಿ ರೈಲನ್ನು ಸ್ವೀಕರಿಸಿದ ನಂತರ, ನಿಗಮಕ್ಕೆ ಅಗತ್ಯವಾದ ಪ್ರಾಯೋಗಿಕ ಸಂಚಾರ ನಡೆಸಲು ಮತ್ತು ವಾಣಿಜ್ಯ ಕಾರ್ಯಾಚರಣೆಗಳಿಗೆ ಅನುಮೋದನೆ ಪಡೆಯಲು ಕನಿಷ್ಠ ಮೂರು ತಿಂಗಳು ಅಗತ್ಯವಿದೆ. ಹಾಗಾಗಿ, ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಸದ್ಯಕ್ಕೆ ಆರಂಭವಿಲ್ಲ. ಸಾರ್ವತ್ರಿಕ ಚುನಾವಣೆಯ ನಂತರವೇ ಪ್ರಾರಂಭವಾಗಲಿದೆ” ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿಎಲ್ ಯಶವಂತ ಚವಾಣ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಕಾರಣ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿರುವುದರಿಂದ ಬಿಎಂಆರ್‌ಸಿಎಲ್ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವಾಣಿಜ್ಯ ಕಾರ್ಯಾಚರಣೆ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಹಳದಿ ಮಾರ್ಗವು ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಸಂಪರ್ಕಿಸಲಿದೆ. ಈ ಮಾರ್ಗವು ಒಟ್ಟು 19.15 ಕಿ.ಮೀ ಇರಲಿದೆ.
ಸಿವಿಲ್ ಕಾಮಗಾರಿಗಳು (ವಾಯಡಕ್ಟ್‌ಗಳು ಮತ್ತು ನಿಲ್ದಾಣಗಳ ನಿರ್ಮಾಣ) 99.7% ಪೂರ್ಣಗೊಂಡಿದ್ದರೂ, ರೈಲು ಸೆಟ್‌ಗಳ ಕೊರತೆಯಿಂದ ಮಾರ್ಗದ ಪ್ರಾರಂಭವನ್ನು ತಡೆಹಿಡಿಯಲಾಗಿದೆ.
ಫೆಬ್ರವರಿ 2020ರಲ್ಲಿ ನಮ್ಮ ಮೆಟ್ರೋ ಹಾಗೂ ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಜತೆಗೆ ಮಾಡಿಕೊಂಡ ಒಪ್ಪಂದದಂತೆ ಬಿಎಂಆರ್‌ಸಿಎಲ್‌ಗೆ ಒಟ್ಟು 216 ಕೋಚ್‌ಗಳ 36 ರೈಲು ಸೆಟ್‌ಗಳು ಲಭಿಸಲಿವೆ. ಸದ್ಯ ಆರ್ ವಿ ರಸ್ತೆಯಲ್ಲಿ ಮೊದಲ ಸೆಟ್‌ಗಳು ಕಾರ್ಯಾಚರಣೆ ನಡೆಸಲಿವೆ. ಈ ರೈಲು ಸೆಟ್‌ಗಳಲ್ಲಿ 21 ನೇರಳೆ, ಹಸಿರು ಲೈನ್‌ಗಳಲ್ಲಿ ಹಾಗೂ ಉಳಿದವುಗಳನ್ನು ಹಳದಿ ಲೈನ್‌ನಲ್ಲಿ ನಿಯೋಜಿಸಲು ನಿಗಮ ಚಿಂತನೆ ನಡೆಸಿದೆ.
ಚೀನಾ ಸಂಸ್ಥೆ 204 ಕೋಚ್‌ಗಳನ್ನು ತಯಾರಿಸಲು ಬಂಗಾಳ ಮೂಲದ ಟಿಟಾಗರ್ ವ್ಯಾಗನ್ಸ್ ಲಿಮಿಟೆಡ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಬೋಗಿಗಳನ್ನು ಪೂರೈಕೆ ಮಾಡಲಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಏಕ ಬಳಕೆಯ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿರುವ ಮಳಿಗೆಗಳಿಗೆ ಬೀಗ ಜಡಿದ ಬಿಬಿಎಂಪಿ
ಚೀನಾದಿಂದ ಆದಷ್ಟು ಶೀಘ್ರವೇ ಇಂಜಿನಿಯರ್‌ಗಳು ಬೆಂಗಳೂರಿಗೆ ಆಗಮಿಸಿ, ರೈಲುಗಳ ಜೋಡಣೆ ಮತ್ತು ಪರೀಕ್ಷೆಗಾಗಿ ಕೌಶಲ್ಯ ತರಬೇತಿ ನೀಡಲಿದ್ದಾರೆ. ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಆರ್ ವಿ ರಸ್ತೆ ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳು ಓಡಾಡಲಿವೆ.
ಹಳದಿ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಬಿಎಂಆರ್‌ಸಿಎಲ್‌ಗೆ ಕನಿಷ್ಠ ಮೂರರಿಂದ ನಾಲ್ಕು ರೈಲು ಸೆಟ್‌ಗಳ ಅಗತ್ಯವಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.