ರಾಜ್ಯ ರಾಜಧಾನಿ ಬೆಂಗಳೂರಿನಿಂದ ರಾಜ್ಯದ ಸುಮಾರು 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಅನ್ನು ಜನವರಿ 16ರಿಂದ ಜನವರಿ 19ರವರೆಗೆ ಬಂದ್ ಮಾಡಲಾಗಿತ್ತು. ಈ ಹಿನ್ನೆಲೆ, ಪೀಣ್ಯ ಸುತ್ತಮುತ್ತ ವಾಹನ ಸಂಚಾರ ಸಂರ್ಪೂಣ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಿದ್ದರು. ಇದೀಗ, ಲೋಡ್ ಟೆಸ್ಟಿಂಗ್ ಕಾಮಗಾರಿಯು ಪೂರ್ಣಗೊಂಡಿದ್ದು, ಜನವರಿ 19ರಿಂದ ಬೆಳಗ್ಗೆ 11 ಗಂಟೆಯಿಂದ ಲಘು ಮೋಟಾರು ವಾಹನಗಳು ಮತ್ತು ಲಘು ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪೀಣ್ಯ ಫ್ಲೈ ಓವರ್ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಂಡಿದ್ದ ಲೋಡ್ ಟೆಸ್ಟಿಂಗ್ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಂಬರುವ ದಿನಗಳಲ್ಲಿ ಪ್ರಕಟಿಸುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಹೇಳಿದೆ.
ಮೂರು ದಿನಗಳ ಲೋಡ್ ಟೆಸ್ಟಿಂಗ್ನಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿರುವ ಹಿನ್ನೆಲೆ ಡಾ. ಶಿವಕುಮಾರ ಸ್ವಾಮೀಜಿ (ಪೀಣ್ಯ) ಫ್ಲೈಓವರ್‌ಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮುಂದಿನ 20-30 ದಿನಗಳ ಅಂತರದಲ್ಲಿ ಮೇಲ್ಸೇತುವೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೂ ಅವಕಾಶ ನೀಡುವ ಸಾಧ್ಯತೆ ಇದೆ. ಸದ್ಯ ಈ ಮೇಲ್ಸೇತುವೆ ಮೇಲೆ ಲಘು ಗೂಡ್ಸ್ ವಾಹನಗಳ ಸಂಚಾರಕ್ಕೂ ಅವಕಾಶ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಆನೇಕಲ್ | ನಿರ್ಮಾಣ ಹಂತದ ಶಾಲಾ ಕಟ್ಟಡ ಕುಸಿದು ಇಬ್ಬರು ಸಾವು: 20 ಜನರಿಗೆ ಗಾಯ
ಮೂರು ದಿನ ಬಂದ್ ಆಗಿದ್ದ ಫ್ಲೈಓವರ್
ಬರೋಬ್ಬರಿ 22 ಜಿಲ್ಲೆಗಳ ಸಂಚಾರಕ್ಕೆ ರಹದಾರಿ ಆಗಿರುವ ಪೀಣ್ಯ ಎಲಿವೇಟೆಡ್ ಹೈವೆಯಲ್ಲಿ ಅಳವಡಿಸಲಾಗಿದ್ದ ವಯಾಡಕ್ಟ್ನಲ್ಲಿ ದೋಷ ಕಂಡು ಬಂದ ಹಿನ್ನೆಲೆ, ಪೀಣ್ಯ ಮೇಲ್ಸೇತುವೆಯ ಪಿಲ್ಲರ್ 101-102ರ ನಡುವಿನ ವಯಾಡಕ್ಟ್ ದುರಸ್ತಿಗಾಗಿ ಮೂರು ವರ್ಷಗಳಿಂದ ಫ್ಲೈಓವರ್‌ನಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ವಯಾಡಕ್ಟ್ ದುರಸ್ತಿ ಕಾರ್ಯ ಪೂರ್ಣಗೊಂಡ ಹಿನ್ನೆಲೆ, ಲೋಡ್ ಟೆಸ್ಟಿಂಗ್‌ಗಾಗಿ ಜ.16ರ ರಾತ್ರಿಯಿಂದ ಫ್ಲೈಓವರ್‌ನಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು.
ಮೂರು ದಿನಗಳ ಕಾಲ ಲೋಡ್ ಟೆಸ್ಟಿಂಗ್‌ಗಾಗಿ ಎನ್‌ಹೆಚ್‌ಎ ಮನವಿ ಮೇರೆಗೆ ಸಂಚಾರ ಪೊಲೀಸರು ಫ್ಲೈಓವರ್ ಬಂದ್ ಮಾಡಿದ್ದರು.
ಸುಮಾರು ಮೂರು ವರ್ಷದಿಂದ ಪೀಣ್ಯ ಫ್ಲೈಓವರ್ ಮೇಲೆ ಭಾರೀ ವಾಹನಗಳ ಸಂಚಾರ ಬಂದ್ ಆಗಿದೆ. 2021ರಲ್ಲಿ ಪೀಣ್ಯ ಫ್ಲೈಓವರ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಭಾರೀ ಪ್ರಮಾಣದ ವಾಹನಗಳ ಸಂಚಾರ ನಿಷೇಧ ಮಾಡಲಾಗಿತ್ತು.
‘ಸಂಚಾರ ಸಲಹೆ’
‘Traffic advisory’ pic.twitter.com/Qg3GsWeDgW— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) January 19, 2024
ಪೀಣ್ಯ ಫ್ಲೈಓವರ್‌ನ ಗುಣಮಟ್ಟ ಸರಿಯಿಲ್ಲ, ಕಳಪೆ ಕಾಮಾಗಾರಿ, ಇಡೀ ಫ್ಲೈಓವರ್ ಅನ್ನು ಕೆಡವಬೇಕು ಎಂಬ ಚರ್ಚೆ ಆರಂಭವಾಗಿತ್ತು. ಆದರೆ, ಕೆಲ ದಿನಗಳ ನಂತರ ಸಣ್ಣಪುಟ್ಟ ಕಾಮಾಗಾರಿ ಮಾಡಿ ಕೆಲ ಕೇಬಲ್‌ಗಳನ್ನು ಅಳವಡಿಸಿ ಸಣ್ಣ ಪ್ರಮಾಣದ ವಾಹನಗಳ ಓಡಾಟಕ್ಕೆ ಅವಕಾಶ ಮಾಡಲಾಗಿತ್ತು. ಫ್ಲೈಓವರ್ ಮೇಲೆ ಸಂಪೂರ್ಣವಾಗಿ ಹೆವಿ ವೆಹಿಕಲ್‌ಗಳ ಓಡಾಟ ನಿರ್ಬಂಧಿಸಲಾಗಿತ್ತು.
2021 ರಿಂದ ದುರಸ್ತಿ ಕಾರ್ಯ ನಡೆಯುತಿತ್ತು. ಭಾರತೀಯ ವಿಜ್ಞಾನ ಸಂಸ್ಥೆ (ಐಎಎಸ್ಸಿ) ನೀಡಿದ ಸಲಹೆ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾಮಗಾರಿ ನಡೆಸುತ್ತಿತ್ತು. ಸದ್ಯ ಕಾಮಗಾರಿ ಪೂರ್ಣಗೊಂಡಿದೆ.
ಲೋಡ್ ಟೆಸ್ಟಿಂಗ್ ಮಾಡಬೇಕಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಜನವರಿ 16ರ ರಾತ್ರಿ 11 ಗಂಟೆಯಿಂದ ಮೂರು ದಿನ ಸ್ಟ್ರಕ್ಚರಲ್ ಇಂಟಿಗ್ರಿಟಿ ಟೆಸ್ಟ್ ನಡೆಸಿದರು. ಇದೀಗ ಲೋಡ್ ಟೆಸ್ಟಿಂಗ್ ಮುಗಿದಿದ್ದು, ಸಂಚಾರಕ್ಕೆ ಅವಕಾಶ ನೀಡಲಾಗಿದೆ.