ಪಬ್‌ವೊಂದರಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಪಬ್ ಮ್ಯಾನೇಜರ್ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಕ್ಟೋಬರ್ 24ರ ರಾತ್ರಿ ಕೆಂಚನಹಳ್ಳಿ ರಸ್ತೆಯಲ್ಲಿರುವ ಐಡಿಯಲ್ ಹೋಮ್ಸ್ ಬಳಿಯ ಪಬ್‌ವೊಂದರಲ್ಲಿ ಈ ಘಟನೆ ನಡೆದಿದೆ. ಪಬ್ ಮ್ಯಾನೇಜರ್ ರವಿಕಾಂತ್ ಎಂಬುವವರು ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
“ಶ್ರೇಯಸ್ ಹಾಗೂ ಆತನ ಸ್ನೇಹಿತರು ಅಕ್ಟೋಬರ್ 24 ರಂದು ರಾತ್ರಿ 10:45ರ ಸುಮಾರಿಗೆ ಐಡಿಯಲ್ ಹೋಮ್ಸ್ ಬಳಿಯ ಪಬ್ಗೆ ಬಂದಿದ್ದರು. ಈ ವೇಳೆ, ಪಬ್ನಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕನ್ನಡ ಹಾಡು ಹಾಕಿದ್ದಕ್ಕೆ ಪಬ್‌ನ ಮ್ಯಾನೇಜರ್‌ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಜತೆಗೆ ಅವರ ಜೊತೆಯಲ್ಲಿಯೇ ಇದ್ದ ಮಹಿಳೆಯೊಬ್ಬರ ಸಹಾಯದಿಂದ ಪಬ್‌ನ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದ್ದಾರೆ” ಎಂದು ದೂರು ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 3 ದಿನಗಳ ನಂತರ ಬಲೆಗೆ ಬಿದ್ದ ಚಿರತೆ
ಪಬ್ ಮ್ಯಾನೇಜರ್ ರವಿಕಾಂತ್ ನೀಡಿದ ದೂರಿನ ಅನ್ವಯ ಶ್ರೇಯಸ್ ಹಾಗೂ ಆತನ ಸ್ನೇಹಿತನ ವಿರುದ್ಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.