ಮಲಗುವ ವಿಚಾರಕ್ಕೆ ಜಗಳ ಮಾಡಿಕೊಂಡು ಓರ್ವನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಇಬ್ಬರು ಆರೋಪಿಗಳನ್ನು ಆರ್.ಟಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಕಮ್ರಾನ್ ಹಾಗೂ ವಿಶಾಲ್ ಬಂಧಿತರು. ಮೃತ ವ್ಯಕ್ತಿ ಹಾಗೂ ಬಂಧಿತರು ನಿತ್ಯ ಆರ್.ಟಿ ನಗರ ಕೃಷ್ಣಪ್ಪ ಕಾಂಪ್ಲೆಕ್ಸ್ ಬಿಲ್ಡಿಂಗ್‌ನ ತಳಮಹಡಿಯಲ್ಲಿ ಮಲಗಿಕೊಳ್ಳುತ್ತಿದ್ದರು. ಡಿಸೆಂಬರ್ 11ರಂದು ರಾತ್ರಿ ಬಂಧಿತರು ಮಲಗಿಕೊಳ್ಳುವ ಜಾಗದಲ್ಲಿ ಮೃತ ವ್ಯಕ್ತಿ ಮಲಗಿದ ಹಿನ್ನೆಲೆ, ಆತನ ಜತೆಗೆ ಜಗಳ ತೆಗೆದಿದ್ದಾರೆ.
ಜಗಳ ವಿಕೋಪಕ್ಕೆ ಹೋಗಿ ಮಲಗಿಕೊಂಡ ವ್ಯಕ್ತಿಯ ತಲೆಯ ಮೇಲೆ ಆರೋಪಿಗಳು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಈ ಸುದ್ದಿ ಓದಿದ್ದೀರಾ? ನಮ್ಮ ಯಾತ್ರಿ | ಒಕ್ಕೂಟಗಳ ಹಿತಾಸಕ್ತಿಗಿಂತ ಸಮುದಾಯದ ಕಲ್ಯಾಣಕ್ಕೆ ಆದ್ಯತೆ
ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಕೊಲೆಯಾದ ಅಪರಿಚಿತ ವ್ಯಕ್ತಿಯ ಮಾಹಿತಿಯ ಪತ್ತೆಕಾರ್ಯ ಮುಂದುವರೆದಿದೆ.