ರಾಜ್ಯ ರಾಜಧಾನಿ ಬೆಂಗಳೂರಿನ ಜನರು ಎಲ್ಲಿಗಾದರೂ ತುರ್ತಾಗಿ ಹೋಗಬೇಕಾಗಿರುವ ಸಂದರ್ಭದಲ್ಲಿ ಆ್ಯಪ್ ಆಧಾರಿತ ಆಟೋ ಅಥವಾ ಕ್ಯಾಬ್ಗೆ ಮೊರೆ ಹೋಗುವುದು ಹೆಚ್ಚು. ಈ ವೇಳೆ, ಚಾಲಕರು ರೈಡ್ ಕ್ಯಾನ್ಸಲ್ ಮಾಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಇನ್ನು ನಗರದಲ್ಲಿ ಓಡಾಡುವ ಆಟೋಗಳು ಗ್ರಾಹಕರು ಕರೆದ ಕಡೆ ಬರುವುದಿಲ್ಲ. ಬಂದರೂ ಮೀಟರ್ ಮೇಲೆ ಇಷ್ಟು ಹಣ ಜಾಸ್ತಿ ಕೊಡಬೇಕು ಎಂದು ಕೇಳುತ್ತಾರೆ. ಈ ಎಲ್ಲ ಸಮಸ್ಯೆಗಳ ಮಧ್ಯೆ ಪ್ರಯಾಣಿಕರಿಗೆ ಹೆಚ್ಚಿನ ದರದೊಂದಿಗೆ ರೈಡ್ ಕ್ಯಾನ್ಸಲ್ ಆಗುವುದಿಲ್ಲ ಎಂದು ರ್ಯಾಪಿಡೋ ಭರವಸೆ ನೀಡಿ, ‘ಆಟೋ ಪ್ಲಸ್’ ಸೇವೆ ಆರಂಭ ಮಾಡಿದೆ.
ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್ ರ್ಯಾಪಿಡೋ ಬೆಂಗಳೂರಿನಲ್ಲಿ ‘ಆಟೋ ಪ್ಲಸ್’ ಸೇವೆಯನ್ನು ಪ್ರಾರಂಭಿಸಿದೆ. ಇದು ಪ್ರೀಮಿಯಂ ಆಟೋರಿಕ್ಷಾ ಸೇವೆಯಾಗಿದ್ದು, ರೈಡ್ ಬುಕ್ ಮಾಡಿದ ತಕ್ಷಣ ಆಟೋ ಚಾಲಕರಿಂದ ಸವಾರಿ ಅಥವಾ ರೈಡ್ ರದ್ದಾಗುವುದಿಲ್ಲ ಎಂದು ಖಾತರಿಪಡಿಸುತ್ತದೆ. ಆಟೋ ಪ್ಲಸ್ ಸೇವೆಯು ಸಾಮಾನ್ಯ ಆಟೋ ದರಗಳಿಗೆ ಹೋಲಿಸಿದರೆ ಗ್ರಾಹಕರಿಗೆ 25 ರಿಂದ 30 ರಷ್ಟು ದುಬಾರಿಯಾಗಲಿದೆ.
ಆ್ಯಪ್ ಆಧಾರಿತ ಆಟೋ ಸೇವೆ ನೀಡುತ್ತಿದ್ದ ಓಲಾ, ಉಬರ್ ಕಂಪನಿಗಳು 2 ಕಿ.ಮೀ ಗೆ ಪ್ರಯಾಣಿಕರಿಂದ ಕನಿಷ್ಠ ₹100 ದರ ವಿಧಿಸಿ ಜನರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿದ್ದವು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರ ಪರಿಣಾಮ, ಸಾರಿಗೆ ಇಲಾಖೆಯು ಓಲಾ, ಉಬರ್ ಕಂಪನಿಗಳ ಆಟೋ ಸೇವೆ ಸ್ಥಗಿತಕ್ಕೆ ಆದೇಶಿಸಿತ್ತು. ಆಟೋ ಸೇವೆ ಬ್ಯಾನ್ ಮಾಡಿದ್ದ ಆರ್ಟಿಒ ನಿರ್ಧಾರಕ್ಕೆ ಓಲಾ, ಉಬರ್ ವಿರೋಧ ವ್ಯಕ್ತಪಡಿಸಿತ್ತು.
ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿತು. ಕಂಪನಿಗಳೊಂದಿಗೆ ಚರ್ಚಿಸಿ ದರ ನಿಗದಿ ಮಾಡುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ, ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿರುವ ಓಲಾ, ಉಬರ್ ಕಂಪನಿಗಳ ಆಟೋ ರಿಕ್ಷಾ ಪ್ರಯಾಣ ದರವನ್ನು ರಾಜ್ಯ ಸರಕಾರ ನಿಗದಿಪಡಿಸಿತ್ತು.
ಸಾಮಾನ್ಯ ಆಟೋಗಳಲ್ಲಿ ಕನಿಷ್ಠ ಪ್ರಯಾಣ ದರವು 2 ಕಿ.ಮೀಗೆ ₹30 ಇದೆ. ಅಗ್ರಿಗೇಟರ್ ಕಂಪನಿಗಳು ₹30 ಜತೆಗೆ ಶೇ. 5ರಷ್ಟು ಸೇವಾ ಶುಲ್ಕ ಹಾಗೂ ಶೇ.5 ರಷ್ಟು ಜಿಎಸ್ಟಿ ಶುಲ್ಕವನ್ನಷ್ಟೇ ಪ್ರಯಾಣಿಕರಿಂದ ಸಂಗ್ರಹಿಸಬೇಕು. ಇದರಂತೆ ಕನಿಷ್ಠ ದರವು ₹33 ಆಗಲಿದೆ. ನಂತರದ ಪ್ರತಿ ಕಿ.ಮೀಗೆ ₹15 ಜತೆಗೆ ಶೇ.10 ರಷ್ಟು ಹೆಚ್ಚುವರಿ ದರವನ್ನು ಪ್ರಯಾಣಿಕರು ಪಾವತಿಸಬೇಕು ಎಂದು ಸರ್ಕಾರ ನವೆಂಬರ್ 2021ರಲ್ಲಿ ಆಟೋ ದರ ನಿಗದಿ ಮಾಡಿ ಸೂಚನೆ ನೀಡಿತ್ತು.
ಆಯಾ ಕಾಲಕ್ಕೆ ನಿಗದಿಯಾಗುವ ಆಟೋ ಪ್ರಯಾಣ ದರದ ಮೇಲೆ ಶೇ. 10 ರಷ್ಟನ್ನು ಮಾತ್ರ ಹೆಚ್ಚಳ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೋಟಾರು ವಾಹನಗಳ ಕಾಯಿದೆ 1988 ರ ಕಲಂ 67 ರಡಿ ಹೊರಡಿಸಿರುವ ಆದೇಶದಂತೆ ಈ ಅವಕಾಶ ಕಲ್ಪಿಸಲಾಗಿದೆ. ಅಗ್ರಿಗೇಟರ್ ಸೇವೆ ಒದಗಿಸಲು ಪರವಾನಗಿ ಪಡೆದಿರುವ ಸಂಸ್ಥೆಗಳು ಮಾತ್ರ ಈ ದರದ ಆಧಾರದ ಮೇಲೆ ಆಟೋ ಸೇವೆ ಕಲ್ಪಿಸಬಹುದಾಗಿದೆ.
ಆದರೆ, ರ್ಯಾಪಿಡೋನ ನಿಯಮಿತ ಆಟೋರಿಕ್ಷಾ ಕನಿಷ್ಠ ಶುಲ್ಕ ₹46 ಆಗಿದ್ದು, ಆಟೋ ಪ್ಲಸ್ ಕನಿಷ್ಠ ಬೇಡಿಕೆ ₹71 ಇದೆ. ಇವೆರಡೂ ಕರ್ನಾಟಕ ಹೈಕೋರ್ಟ್ ನಿಗದಿಪಡಿಸಿದ ಆಟೋ ಅಗ್ರಿಗೇಟರ್ಗಳ ದರಕ್ಕಿಂತ ಹೆಚ್ಚಾಗಿದೆ.
ಹೈಕೋರ್ಟ್ ತೀರ್ಪು ನೀಡಿದ ಬಳಿಕ ಓಲಾ ಮತ್ತು ಉಬರ್ ನ್ಯಾಯಾಲಯದ ಆದೇಶದ ದರಗಳಿಗೆ ಬದ್ಧವಾಗಿವೆ. ಇತ್ತೀಚೆಗೆ ಆಟೋ ರಿಕ್ಷಾ ಚಾಲಕರ ಒಕ್ಕೂಟ ಪ್ರಾರಂಭ ಮಾಡಿರುವ ‘ನಮ್ಮ ಯಾತ್ರಿ’ ಸಹ ಗ್ರಾಹಕರಿಂದ ಹೆಚ್ಚಿನ ದರವನ್ನು ಪಡೆಯುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಆಟೋ ಪ್ಲಸ್ ಸೇವೆಗಳು ಗ್ರಾಹಕರು ಮತ್ತು ಆಟೋ ಚಾಲಕರಿಗೆ ಇಬ್ಬರಿಗೂ ಪ್ರಯೋಜನವಿದೆ. ಗ್ರಾಹಕರಿಗೆ ರೈಡ್ ಖಾತ್ರಿ ಪಡಿಸುತ್ತಿದೆ ಮತ್ತು ಚಾಲಕರಿಗೆ ಆದಾಯದ ಸ್ಥಿರತೆಯನ್ನು ಒದಗಿಸುತ್ತದೆ ಎಂದು ಸಂಸ್ಥೆ ಹೇಳಿದೆ
ಈ ಸುದ್ದಿ ಓದಿದ್ದೀರಾ? ರ್ಯಾಪಿಡೋ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಸ್ತ್ರಸಂಹಿತೆಗೆ ಎಎಪಿ ವಿರೋಧ
ಪ್ರಸ್ತುತ ಆಟೋ ಪ್ಲಸ್ನಲ್ಲಿ 10,000 ಆಟೋ ಚಾಲಕರು ನೋಂದಣಿಯಾಗಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ 50,000 ಚಾಲಕರನ್ನು ಸೇವೆಗೆ ಸೇರಿಸಲು ಕಂಪನಿ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 2023 ರಲ್ಲಿ ಹೈದರಾಬಾದ್ನಲ್ಲಿ ‘ಆಟೋ ಪ್ಲಸ್’ ಸೇವೆಯನ್ನು ಪ್ರಾರಂಭಿಸಲಾಗಿತ್ತು. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ, ಬೆಂಗಳೂರಿನಲ್ಲಿಯೂ ಸೇವೆ ಆರಂಭಿಸಿದೆ.