ರಾಜಧಾನಿ ಬೆಂಗಳೂರಿನಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೌಸಿಂಗ್ ಸೊಸೈಟಿಯು ಕುಡಿಯುವ ನೀರಿನ ದುರುಪಯೋಗ ತಡೆಯಲು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ನೀರಿನ ಬಳಕೆಯನ್ನು ಶೇ.20ರಷ್ಟು ಕಡಿಮೆ ಮಾಡುವಂತೆ ನಿವಾಸಿಗಳಿಗೆ ಸೂಚಿಸಲು ಸೊಸೈಟಿ ನಿರ್ಧರಿಸಿದೆ.
ಜತೆಗೆ, ನಿಯಮಗಳನ್ನು ಮತ್ತೆ ಮತ್ತೆ ಉಲ್ಲಂಘಿಸಿದಲ್ಲಿ ₹5,000ವರೆಗೂ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ನೀರಿನ ದುರ್ಬಳಕೆ ಮೇಲೆ ಕಣ್ಗಾವಲಿಡಲು ಸಿಬ್ಬಂದಿ ನೇಮಕ ಮಾಡುವುದಾಗಿಯೂ ಕೂಡ ಹೇಳಿದೆ.
ಬೆಂಗಳೂರಿನ ಹಲವಾರು ಹೌಸಿಂಗ್ ಸೊಸೈಟಿಗಳು, ಸದ್ಯ ನಡೆಯುತ್ತಿರುವ ನೀರಿನ ಬಿಕ್ಕಟ್ಟಿನ ಮಧ್ಯೆ ತಮ್ಮ ದೈನಂದಿನ ನೀರಿನ ಬಳಕೆಯ ಬಗ್ಗೆ ಜಾಗರೂಕರಾಗಿರಲು ನಿವಾಸಿಗಳಿಗೆ ಸಲಹೆ ನೀಡಿವೆ. ವೈಟ್‌ಫೀಲ್ಡ್, ಯಲಹಂಕ ಹಾಗೂ ಕನಕಪುರ ಸೇರಿದಂತೆ ಕೆಲವು ಪ್ರದೇಶಗಳು ತೀವ್ರ ನೀರಿನ ಸಮಸ್ಯೆಗೆ ಒಳಗಾಗಿವೆ.
ವೈಟ್‌ಫೀಲ್ಡ್‌ನಲ್ಲಿರುವ ಪಾಮ್ ಮೆಡೋಸ್ ಹೌಸಿಂಗ್ ಸೊಸೈಟಿ ತನ್ನ ನಿವಾಸಿಗಳಿಗೆ ನೀಡಿದ ನೋಟಿಸ್‌ನಲ್ಲಿ ”ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ (ಬಿಡಬ್ಲ್ಯುಎಸ್‌ಎಸ್‌ಬಿ) ನೀರು ಪಡೆದಿಲ್ಲ. ನಾವು ನಮ್ಮ ಬೋರ್‌ವೆಲ್‌ಗಳ ನಿರ್ವಹಣೆ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆಯಿದೆ” ಎಂದು ಹೇಳಿದೆ.
”ಇಂತಹ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ, ಸೊಸೈಟಿಯು ತನ್ನ ಪ್ರತಿಯೊಂದು ಘಟಕಗಳಿಗೆ ನೀರಿನ ಬಳಕೆಯನ್ನು ಶೇಕಡ 20ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ನಿವಾಸಿಗಳು ನೀರಿನ ಬಳಕೆಯನ್ನು ಶೇ.20 ರಷ್ಟು ಕಡಿತಗೊಳಿಸದಿದ್ದರೆ, ₹5,000 ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ. ಸರಬರಾಜಿಗೆ ಅನುಗುಣವಾಗಿ ಕಡಿತವು ಹೆಚ್ಚಾಗಬಹುದು. ಗರಿಷ್ಠ ಬೇಸಿಗೆಯ ತಿಂಗಳುಗಳಲ್ಲಿ 40 ಪ್ರತಿಶತದಷ್ಟು ಹೆಚ್ಚಾಗುತ್ತದೆ” ಎಂದು ಸೊಸೈಟಿ ನೋಟಿಸ್‌ನಲ್ಲಿ ತಿಳಿಸಿದೆ.
ಪುನರಾವರ್ತಿತ ಉಲ್ಲಂಘನೆಗಳಿಗೆ ಹೆಚ್ಚಿನ ದಂಡ ವಿಧಿಸುವ ಎಚ್ಚರಿಕೆಯನ್ನೂ ಸಹ ನೀಡಿದೆ. ಗಸ್ತು ತೀವ್ರಗೊಳಿಸಲು ಪ್ರತ್ಯೇಕ ಭದ್ರತಾ ವ್ಯಕ್ತಿಯನ್ನು ನೇಮಿಸಿಕೊಳ್ಳಲಾಗುವುದು ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯ ಪಠ್ಯಕ್ರಮದ 5, 8, 9ನೇ ತರಗತಿಗಳ ಬೋರ್ಡ್ ಪರೀಕ್ಷೆ ರದ್ದು ಪಡಿಸಿದ ಹೈಕೋರ್ಟ್
ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನ ಮತ್ತೊಂದು ಪ್ರದೇಶ ಕನಕಪುರ. ಇಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್ ಮಾಲೀಕರ ಸಂಘ (ಪಿಎಫ್‌ಸಿಎಒಎ) ತನ್ನ 2,500 ನಿವಾಸಿಗಳಿಗೆ ಇದೇ ರೀತಿಯ ಸೂಚನೆ ನೀಡಿದೆ. ಜತೆಗೆ, ಬಾಲ್ಕನಿ ಪ್ರದೇಶವನ್ನು ಸ್ವಚ್ಛಗೊಳಿಸಲು ನೀರನ್ನು ಸುರಿಯಬಾರದು. ಮಾಪ್ ಅನ್ನು ಬಳಸಬೇಕು. ನೀರಿನ ಸೋರಿಕೆಯನ್ನು ಗಮನಿಸಿ ಕೂಡಲೇ ಸರಿಪಡಿಸುವಂತೆ ನಿವಾಸಿಗಳಿಗೆ ಮನವಿ ಮಾಡಿದೆ.
ಬೆಂಗಳೂರು ವಸತಿ ಸಂಘವು ನಿವಾಸಿಗಳಿಗೆ ನೀರಿನ ಸಮಸ್ಯೆಯ ಬಗ್ಗೆ ಎಚ್ಚರಿಕೆ ನೀಡಿದೆ. ಓವರ್ಹೆಡ್ ಟ್ಯಾಂಕ್ಗಳಲ್ಲಿ ಮಾತ್ರ ನೀರು ಸಂಗ್ರಹವಾಗಿದ್ದು, ಅದು ಹೆಚ್ಚು ದಿನ ಉಳಿಯುವುದಿಲ್ಲ. ನೀರು ಪೂರೈಕೆ ಸಮಸ್ಯೆ ಇದೆ ಎಂದು ತಿಳಿಸಿದೆ.