ಬೇಕರಿ ಬಳಿ ಟೀ ಕುಡಿಯಲು ತೆರಳಿದ್ದ ರೌಡಿಶೀಟರ್ ಸಹದೇವನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ಯ ಪುಟ್ಟೇನಹಳ್ಳಿ ಪೊಲೀಸರು ವಿನಯ್, ಧರ್ಮ ಎಂಬುವರು ಸೇರಿದಂತೆ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರಿನ ಚುಂಚನಘಟ್ಟ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ 9.30ರ ಸುಮಾರಿಗೆ ಆರು ದುಷ್ಕರ್ಮಿಗಳು ರೌಡಿಶೀಟರ್ ಸಹದೇವನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.
ಕೋಣನಕುಂಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಸಹದೇವ್ ಟೀ ಕುಡಿಯಲು ಬೇಕರಿ ಬಳಿ ಬಂದಿದ್ದಾನೆ. ಈ ವೇಳೆ, ರೌಡಿಶೀಟರ್ ಸಹದೇವನನ್ನು ಟಾರ್ಗೆಟ್ ಮಾಡಿದ್ದ ಆರು ದುಷ್ಕರ್ಮಿಗಳು ಮೂರು ಬೈಕ್ಗಳಲ್ಲಿ ಬಂದು ಸಹದೇವ್ ಮೇಲೆ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶ ಬಿಡುವ ವಿಚಾರಕ್ಕೆ ರೌಡಿಶೀಟರ್ ಸಹದೇವ್, ರಾಬರಿ ನವೀನ್ ಮತ್ತು ವಿನಯ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿ ವಿನಯ್ ಮತ್ತು ಆತನ ತಮ್ಮನ ಮೇಲೆ ಸಹದೇವ ಮತ್ತು ರಾಬರಿ ನವೀನ್ ಹಲ್ಲೆ ಮಾಡಿದ್ದರು. ಈ ವೇಳೆ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿತ್ತು. ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ
ಸಹದೇವ ಬೇಕರಿ ಬಳಿ ಟೀ ಕುಡಿಯಲು ತೆರಳಿದಾಗ ಅಲ್ಲಿಯೇ ಇದ್ದ ವಿನಯ್ ಗ್ಯಾಂಗ್ ಮತ್ತು ಸಹದೇವ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ಆರಂಭವಾಗಿದೆ. ವಿನಯ್ ಗ್ಯಾಂಗ್ ಸಹದೇವನೊಂದಿಗೆ ನವೀನ್ ಬಗ್ಗೆ ವಿಚಾರಿಸಿದೆ. ಯಾಕೆ ಅವತ್ತು ಕೊಟ್ಟಿದ್ದು ಸಾಕಾಗಿಲ್ವಾ ಎಂದು ಸಹದೇವ ಹೇಳಿದ್ದಾನೆ. ಇದರಿಂದ ಕೋಪಗೊಂಡ ಆರೋಪಿಗಳು ಏಕಾಏಕಿ ಸಹದೇವನ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಮೂರು ದ್ವಿಚಕ್ರ ವಾಹನಗಳಲ್ಲಿ ವಿನಯ್ ಗ್ಯಾಂಗ್ ಬಂದಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪುಟ್ಟೇನಹಳ್ಳಿ ಪೊಲೀಸರು ಸದ್ಯಕ್ಕೆ ಆರೋಪಿಗಳಾದ ವಿನಯ್, ಧರ್ಮ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳ ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ.