2022ರ ಮಾನ್ಸೂನ್ ಸಮಯದಲ್ಲಿ ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಕೆರೆಗಳು ತುಂಬಿ ಪ್ರವಾಹ ಸೃಷ್ಟಯಾಗಿತ್ತು. ಹೀಗಾಗಿ, ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 100 ಕೆರೆಗಳಿಗೆ ಸ್ಲೂಸ್ ಗೇಟ್‌ಗಳನ್ನು ಅಳವಡಿಸುವ ಯೋಜನೆ ಸೇರಿದಂತೆ ಹಲವಾರು ಕ್ರಮಗಳನ್ನು ಘೋಷಣೆ ಮಾಡಿದ್ದವು. ಆದರೆ, ಎರಡು ವರ್ಷ ಕಳೆದರೂ ‘ಸ್ಲೂಸ್ ಗೇಟ್’ ಅಳವಡಿಕೆಯಲ್ಲಿ ಇನ್ನು ಯಾವುದೇ ಪ್ರಗತಿ ಕಂಡು ಬಂದಿಲ್ಲ.
100 ಕರೆಗಳಿಗೆ ಸ್ಲೂಸ್ ಗೇಟ್‌ಗಳನ್ನು ಅಳವಡಿಸುವ ಪ್ರಸ್ತಾವನೆ ಸರ್ಕಾರ ಬಿಡುಗಡೆ ಮಾಡಿದ್ದರೂ ಕೂಡ ಇಲ್ಲಿಯವರೆಗೂ ನಗರದ 10 ಕೆರೆಗಳಿಗೆ ಮಾತ್ರ ‘ಸ್ಲೂಸ್ ಗೇಟ್’ ಅಳವಡಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಅಕಾಲಿಕ ಮಳೆಯ ಹಿನ್ನೆಲೆ, 2023ರಲ್ಲಿ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮಳೆಯ ಕೊರತೆಯಿಂದಾಗಿ ಹೆಚ್ಚಿನ ಪರಿಣಾಮವೂ ಆ ಸಮಯದಲ್ಲಿ ಬೀರಿರಲಿಲ್ಲ. ಆದರೆ, 2024ರಲ್ಲಿ ಉತ್ತಮ ಮಾನ್ಸೂನ್ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಮ್‌ಡಿ) ಮುನ್ಸೂಚನೆ ನೀಡಿದೆ.
ಮಾನ್ಸೂನ್ ಮಳೆಯಿಂದ ಮುಂದೆ ಉಂಟಾಗುವ ಹಾನಿಯನ್ನು ತಪ್ಪಿಸಲು ಬಿಬಿಎಂಪಿ ಇದನ್ನು ಗಂಭೀರವಾಗಿ ಪರಿಗಣಿಸಿ ಕನಿಷ್ಠ 30 ರಿಂದ 40 ಕೆರೆಗಳಿಗೆ ಸ್ಲೂಸ್ ಗೇಟ್‌ಗಳನ್ನು ಅಳವಡಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
”ಟೋಪೋಲಜಿ ಮತ್ತು ಹೈಡ್ರೋಜಿಯಾಲಜಿ ವಿಶ್ಲೇಷಣೆ ಪ್ರಕಾರ ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳು ಪ್ರವಾಹ ತಗ್ಗಿಸುವ ಕೆರೆಗಳಾಗಿ ಉಳಿದಿಲ್ಲ. ಆದರೆ, 35ರಿಂದ 40 ಕೆರೆಗಳು ಪ್ರವಾಹ ತಗ್ಗಿಸುವ ಸಾಮರ್ಥ್ಯ ಹೊಂದಿವೆ. ಅವುಗಳಿಗೆ ಸ್ಲೂಸ್ ಗೇಟ್‌ಗಳನ್ನು ಅಳವಡಿಸುವುದು ಮುಖ್ಯ” ಎಂದು ಫ್ರೆಂಡ್ಸ್ ಆಫ್ ಲೇಕ್ಸ್‌ನ ರಾಮಪ್ರಸಾದ್ ವಿ ಹೇಳಿದರು.
“ಸೀಗೇಹಳ್ಳಿ ಕೆರೆಯಲ್ಲಿ ಕೇವಲ ಅರ್ಧ ಗಂಟೆ ಸುರಿದ ಮಳೆಗೆ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗುತ್ತಿದೆ. ಬಿಬಿಎಂಪಿ ಇಲ್ಲಿ ಇನ್ನೂ ಸ್ಲೂಸ್ ಗೇಟ್ ಅಳವಡಿಸಿಲ್ಲ. ಇದೀಗ, ಈ ಬಗ್ಗೆ ಸಾರ್ವಜನಿಕರು ಹಲವಾರು ದೂರುಗಳು ನೀಡಿದ್ದಾರೆ. ಆ ಬಳಿಕ, ಬಿಬಿಎಂಪಿ ಅಧಿಕಾರಿಗಳು ಕೆರೆಗಳಿಗೆ ಹರಿದು ಬರುವ ಕಾಲುವೆಗಳನ್ನು ಮಾತ್ರ ಸ್ವಚ್ಛಗೊಳಿಸಿದ್ದಾರೆ. ಒಳದಾರಿಗಳಲ್ಲಿ ಇನ್ನೂ ಕೆಸರು ತುಂಬಿದ್ದು, ನಾಲ್ಕು ವರ್ಷಗಳಿಂದ ಒಳದಾರಿಗಳನ್ನು ಸ್ವಚ್ಛಗೊಳಿಸುವಂತೆ ಬಿಬಿಎಂಪಿಗೆ ಮನವಿ ಮಾಡುತ್ತಿದ್ದೇವೆ. ಕೊನೆಗೆ ಈ ವರ್ಷ ಸಾರ್ವಜನಿಕರ ಒತ್ತಡದಿಂದಾಗಿ ಸ್ವಚ್ಛತೆ ಮಾಡಿದ್ದಾರೆ. ಆದರೆ, ಇತರ ಕೆರೆಗಳಲ್ಲಿ ಈ ಸ್ವಚ್ಛತಾ ಕಾರ್ಯಗಳೂ ಇನ್ನೂ ನಡೆದಿಲ್ಲ” ಎಂದು ಕೆಆರ್ ಪುರದ ಸುತ್ತಮುತ್ತಲಿನ 16 ಕೆರೆಗಳಲ್ಲಿ ಸ್ವಯಂಸೇವಾ ಕಾರ್ಯದಲ್ಲಿ ತೊಡಗಿರುವ ಕೆರೆ ಕಾರ್ಯಕರ್ತ ಬಾಲಾಜಿ ರಘೋತ್ತಮ ಬಾಳಿ ವಿವರಿಸಿದರು.
“ಕೆರೆಗಳಿಗೆ ನೀರು ಹರಿದುಬರುವ ಕಾಲುವೆಗಳನ್ನು ಮಾನ್ಸೂನ್‌ಗೂ ಮುನ್ನ ಶುಚಿಗೊಳಿಸುವ ಚಟುವಟಿಕೆಗಳು ಅಷ್ಟೇನು ನಡೆದಿಲ್ಲ. ಬೆಂಗಳೂರು ಎದುರಿಸಿರುವ ಪ್ರವಾಹವನ್ನು ಗಮನಿಸಿದರೆ, ಇದು ಅಪಾಯಕಾರಿ” ಎಂದು ಕೆರೆಗಳ ಸ್ವಚ್ಛತಾ ಕೆಲಸ ಮಾಡುವ ಅನೇಕ ಸ್ವಯಂಸೇವಕರು ಎಚ್ಚರಿಕೆ ನೀಡಿದ್ದಾರೆ.
“ಕೆರೆ ವಿಭಾಗಕ್ಕೆ ಹಣದ ಕೊರತೆಯಿದ್ದು, ಸ್ಲೂಸ್ ಗೇಟ್‌ಗಳಿಗೆ ಹಣ ಮೀಸಲಿಡುವುದು ಆದ್ಯತೆಯಲಿಲ್ಲ” ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ನಿರ್ವಹಣಾ ಗುತ್ತಿಗೆಯಡಿ ಕೆರೆಗಳಲ್ಲಿನ ಒಳಹರಿವುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಕೆರೆ ಇಲಾಖೆಯ ಹಿರಿಯ ಬಿಬಿಎಂಪಿ ಅಧಿಕಾರಿಗಳು ಹೇಳಿದರು. ಜತೆಗೆ, ಹೆಚ್ಚಿನ ಗುತ್ತಿಗೆದಾರರು ವಾಕಿಂಗ್ ಪ್ರದೇಶವನ್ನು ಮಾತ್ರ ಸ್ವಚ್ಛಗೊಳಿಸುತ್ತಾರೆ. ಇದನ್ನ ಹೊರತುಪಡಿಸಿ ಬೇರೇನೂ ಮಾಡುವುದಿಲ್ಲ ಎಂಬ ಸ್ವಯಂಸೇವಕರು ಆರೋಪಗಳನ್ನ ತಳ್ಳಿಹಾಕಿದರು.
ಈ ಸುದ್ದಿ ಓದಿದ್ದೀರಾ? ಕಾದ ಇಳೆಗೆ ತಂಪೆರೆದ ಮಳೆ: ರಾಜ್ಯದ ಜನರ ಮೊಗದಲ್ಲಿ ಮಂದಹಾಸ
“ಮಾರ್ಚ್‌ನಲ್ಲಿ ಮಂಡಿಸಿದ ಬಿಬಿಎಂಪಿ ಬಜೆಟ್‌ನಲ್ಲೂ ಕೆರೆಗಳಿಗೆ ಕೇವಲ ₹30 ಕೋಟಿ ಮೀಸಲಿಟ್ಟಿದ್ದು, ನಗರದಲ್ಲಿರುವ ಕೆರೆಗಳ ಸಂಖ್ಯೆ ನೋಡಿದರೆ ಇದು ಅತ್ಯಲ್ಪ ಮೊತ್ತ” ಎಂದು ಕೆರೆ ಕಾರ್ಯಕರ್ತರು ಹೇಳಿದರು.
”ನಗರದ ಸುಮಾರು 100 ಕೆರೆಗಳಿಗೆ ಸ್ಲೂಸ್ ಗೇಟ್ ಅಳವಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರದ ಅನುದಾನದಲ್ಲಿ ಯೋಜನೆ ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ಮಂಜೂರಾತಿ ಸಿಕ್ಕಿಲ್ಲ. ಈಗ ನಮ್ಮಲ್ಲಿರುವ ಹಣದಲ್ಲಿ ಎಲ್ಲೆಲ್ಲಿ ಸ್ಲೂಸ್ ಗೇಟ್‌ಗಳನ್ನು ಅಳವಡಿಸಲೂ ಸಾಧ್ಯವೂ ಅಲ್ಲಿ ಸ್ಲೋಸ್ ಗೇಟ್‌ಗಳನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.
ಮೂಲ: ಡೆಕ್ಕನ್ ಹೆರಾಲ್ಡ್