“ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ 9 ಖಾಸಗಿ ಬಸ್ ಚಾಲಕರನ್ನು ಬೆಂಗಳೂರು ಸಂಚಾರ ಪೊಲೀಸರು ಕಂಡು ಹಿಡಿದಿದ್ದು, ಇದೀಗ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬೆಂಗಳೂರು ಸಂಚಾರ ಪೊಲೀಸರು ಗುರುವಾರ ಖಾಸಗಿ ಬಸ್ ಚಾಲಕರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ಗುರುವಾರ 881 ಬಸ್ ಚಾಲಕರನ್ನು ಪರಿಶೀಲನೆ ಮಾಡಿದ್ದು, ಈ ಪೈಕಿ 9 ಚಾಲಕರು ಮದ್ಯಪಾನ ಮಾಡಿದ್ದು ಕಂಡುಬಂದಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
“ಒಂದೊಂದು ಬಸ್‌ನಲ್ಲಿ 50 ರಿಂದ 55 ಜನ ಪ್ರಯಾಣ ಮಾಡುತ್ತಾರೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ, ಎಲ್ಲರಿಗೂ ಅಪಾಯ. ಇದೀಗ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇವೆ. ಡಿಎಲ್ ಅಮಾನತು ಮಾಡಲು ಆರ್‌ಟಿಒಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಬಸ್ ಮಾಲೀಕರಿಗೂ ನೋಟಿಸ್ ನೀಡಲಾಗಿದೆ” ಎಂದಿದ್ದಾರೆ.
“ಬೆಂಗಳೂರಿನಲ್ಲಿ ಆಟೋ ಚಾಲಕರು ಹೆಚ್ಚಿನ ಹಣ ಕೇಳುತ್ತಾರೆ ಹಾಗೂ ಪ್ರಯಾಣಿಕರು ಕರೆದ ಕಡೆಗೆ ಬರುವುದಿಲ್ಲ. ಸಂಚಾರ ನಿಯಮಗಳನ್ನು ಪಾಲನೆ ಮಾಡದೇ, ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುತ್ತಾರೆ ಸೇರಿದಂತೆ ಹಲವಾರು ದೂರುಗಳು ಬಂದಿವೆ. ಕಳೆದ ವರ್ಷ 24 ಖಾಸಗಿ ಬಸ್ ಅಪಘಾತವಾಗಿವೆ. ಇದರಲ್ಲಿ ಹೆಚ್ಚಾಗಿ ಪಾದಚಾರಿಗಳು ಮರಣ ಹೊಂದಿದ್ದಾರೆ. ರಸ್ತೆ ಸುರಕ್ಷತೆ ಹೆಚ್ಚಿಸಲು ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಾಲು ಸಾಲು ರಜೆಯಿಂದ ಸಂಚಾರ ದಟ್ಟಣೆ : ತಮ್ಮ ಊರಿನತ್ತ ಮುಖ ಮಾಡಿದ ಜನರು
“ಖಾಸಗಿ ವಾಹನ, ವಾಟರ್ ಟ್ಯಾಂಕರ್, ಬಿಬಿಎಂಪಿ ಕಸದ ಲಾರಿಯಿಂದ ಹೆಚ್ಚಾಗಿ ಅಪಘಾತಗಳು ಸಂಭವಿಸಿವೆ. ಅವರ ಮೇಲೆ ಕ್ರಮ ಕೈಗೊಳ್ಳಲು ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ” ಎಂದು ತಿಳಿಸಿದ್ದಾರೆ.
“ಅಲ್ಲದೇ, ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ವಾಟರ್ ಟ್ಯಾಂಕರ್ ಚಾಲಕರುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 127 ವಾಹನಗಳ ತಪಾಸಣೆ ನಡೆಸಿದ್ದು, ಯಾವುದೇ ಚಾಲಕರು ಮದ್ಯಪಾನ ಮಾಡದಿರುವುದು ಕಂಡುಬಂದಿದೆ. ಇತರೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ ಚಾಲಕರುಗಳ ವಿರುದ್ಧ 16 ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.