ಅ.23ರ ತಡರಾತ್ರಿ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತ ಎಸಗಿದ ಕಾರು ಚಾಲಕನೊಬ್ಬನಿಗೆ ಸಾರ್ವಜನಿಕರು ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಬಿಟಿಎಂ ಲೇಔಟ್ ಎರಡನೇ ಹಂತದಲ್ಲಿ ಈ ಘಟನೆ ನಡೆದಿದೆ. ಮದ್ಯ ಸೇವಿಸಿ ಕಾರು ಚಲಾಯಿಸಿದ ಚಾಲಕನನ್ನು ವಾಸು ಎಂದು ಗುರುತಿಸಲಾಗಿದೆ.
ವೃದ್ಧ ದಂಪತಿಗೆ ಸೇರಿದ ಕಾರಿನ ಚಾಲಕನಾಗಿ ವಾಸು ಕೆಲಸ ಮಾಡುತ್ತಿದ್ದನು. ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ವಾಪಸ್ ತೆರಳುತ್ತಿದ್ದಾಗ ಮದ್ಯದ ಅಮಲಿನಲ್ಲಿದ್ದ ಕಾರು ಚಾಲಕ ಅಪಘಾತ ಎಸಗಿದ್ದಾನೆ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದ ವಾಸು, ಮೂರು ದ್ವಿಚಕ್ರ ವಾಹನ ಹಾಗೂ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತ ಸಂಭವಿಸಿದ ಬಳಿಕ ಸಾರ್ವಜನಿಕರು ಕಾರು ಚಲಾಯಿಸಿದ ವ್ಯಕ್ತಿಯನ್ನು ತಡೆದು ವಿಚಾರಿಸಿದಾಗ, ಆತ ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮಾಡಿರುವುದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಅಗ್ನಿ ಅವಘಡ ಪರಿಶೀಲನೆ; ಇಲ್ಲಿಯವರೆಗೂ 48 ರೆಸ್ಟೋರೆಂಟ್ ಬಂದ್
ಕಾರು ಚಾಲಕನ ಈ ಕೃತ್ಯವನ್ನು ಕಂಡ ಸಾರ್ವಜನಿಕರು ಸಿಟ್ಟಿಗೆದ್ದು, ಕಾರು ಚಾಲಕ ವಾಸುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ, ಆತನನ್ನು ಮೈಕೋಲೇಔಟ್ ಸಂಚಾರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.