ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಡಿರೌಡಿಗಳ ಪುಂಡಾಟ ಹೆಚ್ಚಳವಾಗಿದ್ದು, ರಾತ್ರಿ ವೇಳೆ ಬಸ್ ನಿಲ್ದಾಣದಲ್ಲಿ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಪುಡಿರೌಡಿಗಳು ಕುಡಿದ ಮತ್ತಿನಲ್ಲಿ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕರ ಮೇಲೆ ಲಾಂಗ್ ಬೀಸಿದ ಘಟನೆ ಕುಮಾರಸ್ವಾಮಿ ಲೇಔಟ್‌ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಏಪ್ರಿಲ್ 4ರ ಮಧ್ಯರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಚಾಲಕ ನಾಗೇಂದ್ರ ಎಂಬುವವರಿಗೆ ತಲೆ, ಕಣ್ಣಿನ ಕೆಳಭಾಗ ಹಾಗೂ ಎಡಕೈಗೆ ಗಾಯವಾಗಿದೆ. ಇನ್ನು ಮಚ್ಚು ಬಿಸುತ್ತಾ ಓಡಿಸಿಕೊಂಡು ಬರುವ ದೃಶ್ಯ ಮೊಬೈಲ್‌ವೊಂದರಲ್ಲಿ ಸೆರೆಯಾಗಿದೆ.
ಏ.4ರಂದು ಮಾರ್ಗ ಸಂಖ್ಯೆ 15E/2ರಲ್ಲಿ ಬಿಎಂಟಿಸಿ ಬಸ್ ಚಾಲಕ ನಾಗೇಂದ್ರ ಅವರು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ 15 ಇ ಬಸ್ ನಿಲ್ದಾಣದಲ್ಲಿ ಕರ್ತವ್ಯ ಮುಗಿಸಿ ನಿರ್ವಾಹಕ ಹಾಗೂ ಚಾಲಕ ಮಲಗಿದ್ದರು. ಬಸ್ ನಿಲ್ದಾಣಕ್ಕೆ ಬಂದ 4 ಜನ ಅಪರಿಚಿತರು ನಿಲ್ದಾಣದಲ್ಲಿ ಜೋರಾಗಿ ಕೂಗಾಡುತ್ತಿದ್ದರು.
“ಆ ವೇಳೆ ನಾನು ಬಸ್‌ನಲ್ಲಿಯೇ ಕುಳಿತುಕೊಂಡು ಅವರಿಗೆ ಇಲ್ಲಿ ಕೂಗಾಡಬೇಡಿ ಎಂದಿದ್ದೆ. ಆಗ ಅವರಲ್ಲಿ ಒಬ್ಬ ನಾವು ಏನಾದರೂ ಮಾಡುತ್ತೇವೆ ನಿನಗೆ ಯಾಕಲೇ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ” ಎಂದು ನಿರ್ವಾಹಕರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ 10ಕ್ಕೇರಿದ ಕಾಲರಾ ಪ್ರಕರಣಗಳ ಸಂಖ್ಯೆ : ಬೆಂಗಳೂರಿನಲ್ಲಿಯೇ 6 ಪ್ರಕರಣಗಳು!
ಆಗ ಬಸ್‌ನಿಂದ ಕೆಳಗಡೆ ಇಳಿದು ಯಾಕಪ್ಪ ಆ ರೀತಿ ಬೈಯುತ್ತೀಯಾ ಎಂದು ಚಾಲಕ ಕೇಳಿದ್ದು, ಆವಾಗ ಚಾಲಕನ ಮೇಲೆ ಕೈಗಳಿಂದ ಮುಖಕ್ಕೆ ಹಾಗೂ ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆ. ಆತನ ಪಕ್ಕದಲ್ಲಿದ್ದ ಇನ್ನೊಬ್ಬನಿಂದ ಚಾಲಕನ ತಲೆಗೆ ಮಚ್ಚಿನಿಂದ ದಾಳಿ ನಡೆಸಿದ್ದು, ಮತ್ತೆ ಮಚ್ಚಿನಿಂದ ಹೊಡೆಯಲು ಬಂದಾಗ, ಚಾಲಕ ಹಾಗೂ ನಿರ್ವಾಹಕ ಅಲ್ಲಿಂದ ಓಡಿ ಹೋಗಿದ್ದಾರೆ. ಬಳಿಕ ಕಂಡಕ್ಟರ್ ಸಹಾಯದಿಂದ ವಾಸವಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು, ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಚಾಲಕ ದೂರು ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.