ಏಪ್ರಿಲ್ 10ರ ಮುಂಜಾನೆ 3 ಗಂಟೆ ಸುಮಾರಿಗೆ ಸ್ಕ್ರಾಪ್ ಗೋದಾಮಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಬಳಿ ನಡೆದಿದೆ.
ಈ ಗೋದಾಮು ಐದು ಎಕರೆ ಪ್ರದೇಶದಲ್ಲಿದ್ದು, ಮೊದಲು ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಹೊತ್ತುಕೊಂಡಿದೆ. ನಂತರ ಶಾರ್ಟ್ ಸರ್ಕ್ಯೂಟ್ನಿಂದ ಇಡೀ ಗೋದಾಮಿಗೆ ಬೆಂಕಿ ವ್ಯಾಪಿಸಿದೆ. ಇನ್ನು ಘಟನೆಯಲ್ಲಿ ಎರಡು ಟ್ರ್ಯಾಕ್ಟರ್, ಒಂದು ಟಾಟಾ ಎಸ್ ಹಾಗೂ ಬೈಕ್ ಬೆಂಕಿಗಾಹುತಿಯಾಗಿದೆ.
ಈ ಜಮೀನು ಕೂಡ್ಲು ಶ್ರೀನಿವಾಸ್ ರೆಡ್ಡಿ ಎಂಬುವವರಿಗೆ ಸೇರಿದ್ದಾಗಿದೆ. ಮೀಜಾನ್ ಎಂಬುವವನು ಸ್ಕ್ರಾಪ್ ಗೋದಾಮು ಅಕ್ರಮವಾಗಿ ನಡೆಸುತ್ತಿದ್ದನು. ಇಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್, ರಬ್ಬರ್ ಹಾಗೂ ಕೆಮಿಕಲ್ ವಸ್ತುಗಳ ದಾಸ್ತಾನು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ | ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಸ್ಥಳಕ್ಕೆ ಆಗಮಿಸಿದ ಸುಮಾರು ಎಂಟು ಅಗ್ನಿಶಾಮಕ ಠಾಣೆ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಲಾಗಿದೆ. ಸತತ ಹತ್ತು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ.
ಇಲ್ಲಿ ಹತ್ತಾರು ವರ್ಷಗಳಿಂದ ಆಕ್ರಮ ಸ್ಕ್ರಾಪ್ ಗೋದಾಮು ನಡೆಯುತ್ತಿದೆ. ಆದರೂ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.