ರಾಜ್ಯ ರಾಜಧಾನಿ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ನಿಮಿತ್ತವಾಗಿ ಜನವರಿ 18 ರಿಂದ 28 ರವರೆಗೆ ಅಂದರೆ ಬರೋಬ್ಬರಿ 11 ದಿನಗಳ ಕಾಲ ವಚನ ಸಾಹಿತ್ಯದ ಪರಿಕಲ್ಪನೆಯಡಿ 215ನೇ ಫಲಪುಷ್ಪ ಪ್ರದರ್ಶನ ಆಯೋಜಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.
12ನೇ ಶತಮಾನದ ಕನ್ನಡದ ತತ್ವಜ್ಞಾನಿ, ಸಮಾಜ ಸುಧಾರಕ, ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯ ವಿಷಯಾಧಾರಿತ ಪ್ರದರ್ಶನ ಆಯೋಜಿಸಲು ತೋಟಗಾರಿಕೆ ಇಲಾಖೆ ಸಿದ್ಧತೆಯಲ್ಲಿ ತೊಡಗಿದೆ.
ಬಸವಣ್ಣನವರು ಲಿಂಗ ತಾರತಮ್ಯ, ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ ಹೋರಾಡಿದರು. ಮಹಿಳೆಯರಿಗೂ ಸಮಾನತೆಯನ್ನು ಪ್ರತಿಪಾದಿಸಿದರು. ಅವರ ಚಿಂತನೆ, ಕಾಯಕ ವೈಖರಿಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದ್ದು, ಈ ಹಿನ್ನೆಲೆ, ಈ ಬಾರಿ ಲಾಲ್‌ಬಾಗ್‌ನಲ್ಲಿ ನಡೆಯುವ 215ನೇ ಫಲಪುಷ್ಪ ಪ್ರದರ್ಶನಕ್ಕೆ ಬಸವಣ್ಣ ಅವರ ಪ್ರತಿಕೃತಿಗಳನ್ನು ಪುಷ್ಪಗಳಿಂದ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಜತೆಗೆ ‘ವಚನ ಸಾಹಿತ್ಯ’ ಕುರಿತಂತೆ ಪುಷ್ಪ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ.
ಈ ಬಗ್ಗೆ ವಚನ ಸಾಹಿತ್ಯ ತಜ್ಞರು, ಬಸವ ಸಮಿತಿ, ಕೂಡಲಸಂಗಮ ಪೀಠ ಸೇರಿದಂತೆ ನಾನಾ ಮಠಗಳ ಮಠಾಧೀಶರನ್ನು ಸಂಪರ್ಕಿಸಿ 12 ಸುತ್ತಿನ ಸಭೆಗಳನ್ನು ನಡೆಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅನುಭವ ಮಂಟಪ ಈ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿರಲಿದೆ. ಸುಮಾರು 7 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ಗಾಜಿನ ಮನೆಯಲ್ಲಿ ಅನುಭವ ಮಂಟಪವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಬಸವಣ್ಣ ಅವರು ತಾಳೆಗರಿಯಲ್ಲಿ ಬರೆದಿರುವ ವಚನಗಳನ್ನು ಸಂಗ್ರಹಿಸುತ್ತಿದ್ದು, ಅವುಗಳನ್ನು ಪ್ರದರ್ಶಿಸಲಿದೆ. ಜತೆಗೆ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಸೇರಿದಂತೆ ಅನೇಕ ಶರಣರ ವಚನಗಳ ಬಗ್ಗೆಯೂ ಮಾಹಿತಿಯು ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಬೇಕೆಂದು ತಜ್ಞರು ಶಿಫಾರಸು ಮಾಡಿದ್ದಾರೆ. ಅನುಭವ ಮಂಟಪ, ಕೂಡಲಸಂಗಮದ ಐಕ್ಯಮಂಟಪ ನಿರ್ಮಾಣಕ್ಕೂ ಚಿಂತನೆ ನಡೆಸಲಾಗಿದೆ. ಈ ಕುರಿತು ಡಿ.26ರಂದು ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೋವಿಡ್ ಶವ ಸಂಸ್ಕಾರಕ್ಕೆ 4 ಚಿತಾಗಾರ ಮೀಸಲಿಟ್ಟ ಬಿಬಿಎಂಪಿ
ಇಡೀ ಲಾಲ್‌ಭಾಗ್‌ನಲ್ಲಿ ಬಸವಣ್ಣ ಸೇರಿದಂತೆ ಅನೇಕ ಶರಣರ 500ರಿಂದ 600 ವಚನಗಳನ್ನು ವಿದ್ಯುತ್ ಕಂಬಗಳು, ಮರಗಳು ಒಳಗೊಂಡಂತೆ ನಾನಾ ಕಡೆ ಪ್ರದರ್ಶಿಸಲು ತೀರ್ಮಾನಿಸಲಾಗಿದೆ. ಬಸವಾದಿ ಶರಣರ ವಚನಗಳು, ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಮಾಡಲಾಗಿದೆ.
ಸಾಣೇಹಳ್ಳಿ ಸ್ವಾಮೀಜಿ ಅವರು ಬಸವ ತತ್ವ ಮತ್ತು ವಚನ ಸಾಹಿತ್ಯವನ್ನು ಒಳಗೊಂಡ 27 ರೂಪಕಗಳನ್ನು ಮಾಡಿದ್ದು, ಅವುಗಳನ್ನು ಲಾಲ್‌ಬಾಗಿನ ನಾಲ್ಕು ಪ್ರಮುಖ ಗೇಟ್‌ಗಳು ಹಾಗೂ ಒಳಭಾಗದಲ್ಲಿ ನಾಲ್ಕು ಸೇರಿದಂತೆ ಒಟ್ಟು ಎಂಟು ಸ್ಕ್ರೀನ್‌ಗಳಲ್ಲಿ ಪ್ರದರ್ಶಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.