ಬೆಂಗಳೂರು ಮಹಾನಗರದಲ್ಲಿ ಮಳೆ ನೀರಿನ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ನಗರದಲ್ಲಿನ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿ, ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಕಟ್ಟಡ ನಿರ್ಮಾಣಕ್ಕೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಸುವಂತೆ ಹಾಗೂ ತಮ್ಮಲ್ಲಿರುವ ಕೊಳವೆಬಾವಿಯ ಮೂಲದ ನೀರನ್ನು ಬೇಸಿಗೆ ಕಾಲದವರೆಗೆ ಮಂಡಳಿಯ ಉಪಯೋಗಕ್ಕೆ ಕಡ್ಡಾಯವಾಗಿ ಹಸ್ತಾಂತರಿಸುವಂತೆ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮಲೀಕರಿಗೆ ಜಲಮಂಡಳಿ ಸೂಚಿಸಿದೆ.
ಈ ಬಗ್ಗೆ ಕಡ್ಡಾಯ ಆದೇಶ ಹೊರಡಿಸಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ), “ಬೆಂಗಳೂರು ಮಹಾನಗರದ ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆಯನ್ನು ಹೊತ್ತಿರುವ ಮಂಡಳಿಯು ನಗರದ ಎಲ್ಲ ನಾಗರೀಕರಿಗೆ ಸಮರ್ಪಕವಾಗಿ ನೀರು ಪೂರೈಸಬೇಕಾಗಿದೆ” ಎಂದಿದೆ.
“ಈ ನಿಟ್ಟಿನಲ್ಲಿ ಪ್ರಸ್ತುತ 20,000 ಚದರ ಅಡಿ ಮೇಲ್ಪಟ್ಟು ಕಟ್ಟಡ ನಿರ್ಮಾಣ ಮಾಡುವ ಮಾಲೀಕರುಗಳೊಂದಿಗೆ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಸುವಂತೆ ಹಾಗೂ ತಮ್ಮಲ್ಲಿರುವ ಕೊಳವೆಬಾವಿಯ ಮೂಲದ ನೀರನ್ನು ಬೇಸಿಗೆ ಕಾಲದವರೆಗೆ ಮಂಡಳಿಯ ಉಪಯೋಗಕ್ಕೆ ಹಸ್ತಾಂತರಿಸಿ ಬೆಂಗಳೂರು ನಾಗರೀಕರ ನೀರು ಸರಬರಾಜಿಗೆ ಅನುವು ಮಾಡಿಕೊಡುವಂತೆ ಕೋರಿದೆ. ಈ ವೇಳೆ ಸಭೆಯಲ್ಲಿ ಎಲ್ಲರೂ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ” ಎಂದು ಹೇಳಿದೆ.
“20,000 ಚದರ ಅಡಿ ಮೇಲ್ಪಟ್ಟು ಕಟ್ಟಡ ನಿರ್ಮಾಣದ ಪ್ರದೇಶದಲ್ಲಿರುವ ಕೊಳವೆ ಬಾವಿಗಳ ಸಂಬಂಧ ಸಾರ್ವಜನಿಕ ಹಿತದೃಷ್ಟಿಯಿಂದ ಈ ಆದೇಶ ನೀಡಲಾಗಿದೆ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ತನಿಖಾ ಸಂಸ್ಥೆ ಬಳಸಿ ಕೇಜ್ರಿವಾಲ್‌ರನ್ನು ಬಂಧಿಸಿದ್ದಾರೆ: ಮುಖ್ಯಮಂತ್ರಿ ಚಂದ್ರು
“ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34ರ ಅನುಸಾರ ಹಾಗೂ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011ರ ಕಂಡಿಕೆ 11 ರನ್ವಯ ಸಾರ್ವಜನಿಕ ಹಿತದೃಷ್ಟಿಯಿಂದ ಬೇಸಿಗೆ ಕಾಲ ಮುಗಿಯುವವರೆಗೆ ಅಥವಾ ಮುಂದಿನ ಆದೇಶದವರೆಗೆ 20,000 ಚದರ ಅಡಿ ಮೇಲ್ಪಟ್ಟು ಕಟ್ಟಡ ನಿರ್ಮಾಣದ ಪ್ರದೇಶದಲ್ಲಿರುವ ಕೊಳವೆ ಬಾವಿಗಳನ್ನು ಮಂಡಳಿಯ ಸುರ್ಪದಿಗೆ ನೀಡಬೇಕು” ಎಂದು ಕಟ್ಟಡ ಮಾಲೀಕರಿಗೆ ಜಲಮಂಡಳಿ ಆದೇಶಿಸಿದೆ.
ಮುಂದುವರೆದು, ಕಟ್ಟಡ ನಿರ್ಮಾಣ ಕಾಮಗಾರಿಗೆ ಆದೇಶಿಸಿರುವಂತೆ ಸಂಸ್ಕರಿಸಿದ ನೀರನ್ನು ಪಡೆಯಬಹುದಾಗಿದೆ ಎಂದು ಹೇಳಿದೆ.