ರಾಜ್ಯ ರಾಜಧಾನಿ ಬೆಂಗಳೂರಿನ ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಚಿಕ್ಕಪೇಟೆಯಲ್ಲಿ ಕಿರಿದಾದ ರಸ್ತೆಗಳಿವೆ. ಜತೆಗೆ ರಸ್ತೆಯ ಒಂದು ಬದಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಕಳೆದ ಒಂದು ತಿಂಗಳಿನಿಂದ ವಾಹನ ಸವಾರರು ಈ ರಸ್ತೆಯಲ್ಲಿ ಸಂಚಾರ ಮಾಡುವುದೇ ಸವಾಲಾಗಿ ಪರಿಣಮಿಸಿದೆ. ಅಲ್ಲದೆ, ಚಿಕ್ಕಪೇಟೆಗೆ ಭೇಟಿ ನೀಡುವವರು ಕನಿಷ್ಠ ಮುಂದಿನ 100 ದಿನಗಳ ಕಾಲ ಅವ್ಯವಸ್ಥೆಯನ್ನು ಎದುರಿಸಲು ಸಿದ್ಧರಾಗಿರಬೇಕಾಗಿದೆ. ಕಾಮಗಾರಿ ಮತ್ತು ಅವ್ಯವಸ್ಥೆಯಿಂದಾಗಿ ವ್ಯಾಪಾರದಲ್ಲಿ ಭಾರೀ ಕುಸಿತ ಕಂಡಿದೆ ಚಿಕ್ಕಪೇಟೆಯಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿರುವವರು ಅಸಮಧಾಗೊಂಡಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಗಾಂಧಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಾರುಕಟ್ಟೆಯು ನೂರಾರು ಬಟ್ಟೆ ಅಂಗಡಿಗಳು, ಹೋಟೆಲ್ ಸಾಮಾನುಗಳ ಅಂಗಡಿಗಳು, ಎಲೆಕ್ಟ್ರಾನಿಕ್ಸ್ ಮಳಿಗೆಗಳು ಹಾಗೂ ಹಲವಾರು ಸಣ್ಣ ತಿನಿಸುಗಳಿಗೆ ನೆಲೆಯಾಗಿದೆ. ಪ್ರತಿನಿತ್ಯ ಸಾವಿರಾರು ಜನರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಆದರೀಗ, ಜನರು ಈ ರಸ್ತೆಯಲ್ಲಿ ನಡೆದುಕೊಂಡಲು ಹೋಗಲು ಸಹ ಹೆಣಗಾಡುತ್ತಿದ್ದಾರೆ.
ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಅಂಗಡಿ ಮತ್ತು ರೆಸ್ಟೋರೆಂಟ್ ಮಾಲೀಕರು ತಮ್ಮ ಆದಾಯವು 20-30% ರಷ್ಟು ಕಡಿಮೆಯಾಗಿದೆ ಎನ್ನುತ್ತಿದ್ದಾರೆ. ಗ್ರಾಹಕರಿಗೆ ಈ ರಸ್ತೆಗಳಿಗೆ ಬರಲು ಕಷ್ಟವಾಗುತ್ತದೆ. ಹಾಗಾಗಿ, ಅವರು ಆಗಾಗ ಭೇಟಿ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಬಿಡಬ್ಲ್ಯುಎಸ್‌ಎಸ್‌ಬಿ ಪೈಪ್‌ಲೈನ್‌ಗಳನ್ನು ಮಾತ್ರ ಹಾಕಿದೆ. ಇದರ ನಂತರ, ಬಿಬಿಎಂಪಿ ತನ್ನ ಕೆಲಸವನ್ನು ಪ್ರಾರಂಭಿಸುತ್ತದೆ. ಒಟ್ಟಾರೆ ಯೋಜನೆಯು 100 ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಒಂದು ತಿಂಗಳಿನಿಂದ ರಸ್ತೆ ಅಗೆದರೂ ಯಾವುದೇ ಮಹತ್ವದ ಪ್ರಗತಿಯಾಗಿಲ್ಲ. ಗ್ರಾಹಕರ ಸಂಖ್ಯೆ ಮತ್ತು ಮಾರಾಟ ಕಡಿಮೆಯಾಗಿದೆ. ದರ್ಶಿನಿಗಳನ್ನು ನಡೆಸುವ ಹೆಚ್ಚಿನ ಗ್ರಾಹಕರು ತಮ್ಮ ವಸ್ತುಗಳನ್ನು ಲೋಡ್ ಮಾಡಲು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಆದರೆ, ಪ್ರಸ್ತುತ ಪರಿಸ್ಥಿತಿಗಳಿಂದಾಗಿ ಅವರು ಪ್ರಯಾಣಿಸಲು ಕಷ್ಟವಾಗುತ್ತದೆ ಎನ್ನುತ್ತಾರೆ. ಹಾಗಾಗಿ, ಬೇರೆ ಪ್ರದೇಶಗಳಿಂದ ಖರೀದಿಸಲು ಪ್ರಾರಂಭಿಸಿದ್ದಾರೆ”ಎಂದು ಹೋಟೆಲ್‌ವೇರ್ ಅಂಗಡಿ ಹೊಂದಿರುವ ಪಂಕಜ್ ಹೇಳಿದರು.
“ತಾತ್ಕಾಲಿಕ ಗೊಂದಲವನ್ನು ಸರಿಪಡಿಸಬೇಕು. ಇಲ್ಲದಿದ್ದರೇ, ಈ ಪ್ರಕ್ರಿಯೆಯಲ್ಲಿ ನಾವು ಗ್ರಾಹಕರನ್ನು ಕಳೆದುಕೊಳ್ಳುವ ಅಪಾಯವಿದೆ. ಈ 100 ದಿನಗಳಲ್ಲಿ ಗ್ರಾಹಕರು 100 ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ಗ್ರಾಹಕರ ಸಂಖ್ಯೆ ಕಡಿಮೆ ಆದರೆ, ನಾವು ಎಲ್ಲಿಗೆ ಹೋಗಬೇಕು” ಎಂದು ಅವರು ಪ್ರಶ್ನಿಸಿದರು.
ಚಿಕ್ಕಪೇಟೆ ಮೆಟ್ರೋ ನಿಲ್ದಾಣದಿಂದ ಕೆಲವು ಮೀಟರ್ ದೂರದಲ್ಲಿ ಉಪಾಹಾರ ಗೃಹವನ್ನು ನಡೆಸುತ್ತಿರುವ ಬದರಿನಾಥ್ ಮಾತನಾಡಿ, “ರಸ್ತೆಗಳು ಈಗಾಗಲೇ ಯೋಗ್ಯ ಸ್ಥಿತಿಯಲ್ಲಿದ್ದವು. ಹೊಸ ನಿರ್ಮಾಣ ಕಾರ್ಯವು ದೀರ್ಘಾವಧಿಯಲ್ಲಿ ಸಹಾಯಕವಾಗಿದೆ ಎಂದು ತೋರುತ್ತದೆ. ಆದರೂ, ನಾವು ಪ್ರತಿದಿನ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಹಿಂದೆ ಚಿಕ್ಕಪೇಟೆ ಮೆಟ್ರೋದಲ್ಲಿ ಇಳಿದ ನಂತರ ನಮ್ಮ ಅಂಗಡಿಯಲ್ಲಿ ತಿಂಡಿ ತಿನಿಸುಗಳಿಗೆ ಜನರು ನಿಲ್ಲುತ್ತಿದ್ದರು. ಆದರೆ, ಈಗ ಜನಸಂದಣಿ ಕಡಿಮೆಯಾಗುತ್ತಿದೆ. ಸಂಜೆಯ ಹೊತ್ತಿಗೆ, ಯಾವುದೇ ಗ್ರಾಹಕರು ಇರುವುದಿಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಕಾಲಕ್ಕೆ ಸಿಗದ ವೇತನ; ಎಲೆಕ್ಟ್ರಿಕ್ ಬಸ್ ಚಾಲಕರ ಪ್ರತಿಭಟನೆ
ವ್ಯಾಪಾರ ಕಾರ್ಯಕರ್ತ ಸಜ್ಜನ್ ರಾಜ್ ಮೆಹ್ತಾ ಮಾತನಾಡಿ, “ಇಂತಹ ಜನನಿಬಿಡದ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಅಧಿಕಾರಿಗಳ ಸಂಪರ್ಕ ಸಂಖ್ಯೆ ಹಾಗೂ ಕೆಲಸ ಮುಗಿಯುವ ಸಮಯ ಜತೆಗೆ ಅಧಿಕಾರಿಗಳ ಹೆಸರುಗಳನ್ನು ಪ್ರದರ್ಶನ ಮಾಡುವ ಬೋರ್ಡ್ ಹಾಕಬೇಕು. ನೀಡಿದ ಗಡುವಿನಲ್ಲಿ ಕೆಲಸ ಮುಗಿಸದವವರಿಗೆ ದಂಡ ಕಟ್ಟಬೇಕು” ಎಂದಿದ್ದಾರೆ.
“ಬಿಡಬ್ಲೂಎಸ್‌ಎಸ್‌ಬಿ, ಬಿಬಿಎಂಪಿ ಸೇರಿದಂತೆ ಇತರ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ನಗರದಲ್ಲಿ ನಡೆಯುವ ದೈನಂದಿನ ಕಾರ್ಯಾಚರಣೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ತಮ್ಮ ಜೀವನೋಪಾಯಕ್ಕಾಗಿ ಈ ಸ್ಥಳವನ್ನು ಅವಲಂಬಿಸಿರುವವರ ಜೀವನ ಮತ್ತಷ್ಟು ಕಷ್ಟಕರವಾಗಿಸುತ್ತದೆ” ಎಂದು ಮೆಹ್ತಾ ಉಲ್ಲೇಖಿಸಿದ್ದಾರೆ.
“ಸಂಚಾರವನ್ನು ಏಕಮುಖವಾಗಿ ನಿಯಂತ್ರಿಸಲಾಗಿದ್ದರೂ, ಸಂಜೆಯ ವೇಳೆಗೆ, ದ್ವಿಚಕ್ರ ವಾಹನಗಳು ಇನ್ನೊಂದು ಬದಿಯಿಂದ ಬರಲು ಪ್ರಾರಂಭಿಸುತ್ತವೆ. ಒಂದು ಗಂಟೆಯವರೆಗೆ ರಸ್ತೆಯನ್ನು ನಿರ್ಬಂಧಿಸುತ್ತವೆ” ಎಂದು ಅಂಗಡಿಯ ಮಾಲೀಕರು ಹೇಳಿದರು.
“ಈ ಪ್ರದಶವು ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಆದರೂ ನಮಗೆ ತಿಳಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇಲ್ಲಿ ಹೆಚ್ಚಿನ ಜನಸಂದಣಿ ಇದೆ ಹಾಗೂ ಏಕಾಏಕಿ ಈ ರೀತಿ ರಸ್ತೆ ನಿರ್ಮಾಣ ಮಾಡುವುದರಿಂದ ನಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಬಗ್ಗೆ ತಿಳಿದಿದ್ದರೂ ಅಧಿಕಾರಿಗಳು ನಮ್ಮಲ್ಲಿ ಯಾರನ್ನೂ ಸಂಪರ್ಕಿಸದೆ, ತಿಳಿಸದೆ ಇದ್ದಕ್ಕಿದ್ದಂತೆ ರಸ್ತೆಯನ್ನು ಅಗೆಯಲು ಪ್ರಾರಂಭಿಸಿದ್ದಾರೆ”ಎಂದು ಅವರು ವಿಷಾದಿಸಿದರು.