ರಾಜ್ಯ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಲುಲು ಮಾಲ್‌ನಲ್ಲಿ ವಯಸ್ಸಾದ ವ್ಯಕ್ತಿಯೋರ್ವ ಜನರ ನಡುವೆಯೇ ಮಹಿಳೆ ಮತ್ತು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ಟೋಬರ್ 29ರಂದು ಸಾಯಂಕಾಲ ಸುಮಾರು 6:30ಕ್ಕೆ ಬೇಕಂತಲೇ ವಯಸ್ಸಾದ ವ್ಯಕ್ತಿಯೊಬ್ಬ ಮಹಿಳೆಯರು ಮತ್ತು ಯುವತಿಯರು ಇರುವ ಕಡೆ ತೆರಳಿ ಅವರ ಹಿಂಭಾಗವನ್ನು ಸ್ಪರ್ಶಿಸಿ ಬರುತ್ತಿದ್ದನು. ಮಾಲ್‌ನಲ್ಲಿ ಜನರು ಹೆಚ್ಚಾಗಿ ಇದ್ದ ಕಾರಣ ಈ ಘಟನೆಯನ್ನು ಯಾರೂ ಹೆಚ್ಚಾಗಿ ಗಮನಿಸಿಲ್ಲ. ಇದನ್ನು ಕಂಡ ಅಲ್ಲೇ ಇದ್ದ ವ್ಯಕ್ತಿಯೊಬ್ಬರು, ಈ ವಯಸ್ಸಾದ ವ್ಯಕ್ತಿಯನ್ನು ಹಿಂಬಾಲಿಸಿದ್ದಾರೆ.
ವಯಸ್ಸಾದ ವ್ಯಕ್ತಿ ಯುವತಿಯೊಬ್ಬರ ಹಿಂದೆ ತೆರಳಿ ಆಕೆಯ ಹಿಂಬದಿಯನ್ನು ಸ್ಪರ್ಶಿಸಿದ್ದಾನೆ. ಇದನ್ನು ಯಶವಂತ ತೊಗಟವೀರ ಎಂಬುವವರು ವಿಡಿಯೋ ಮಾಡಿ yesh_fitspiration ಎನ್ನುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ವಿಡಿಯೋ ಅಪ್‌ಲೋಡ್ ಮಾಡಿದ್ದ ಯಶವಂತ ತೊಗಟವೀರ ಅವರ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ, “ಅ.29 ರಂದು ಸಂಜೆ 6:30ರ ಸುಮಾರಿಗೆ ಬೆಂಗಳೂರಿನ ಲುಲು ಮಾಲ್ ಫಂಟುರಾದಲ್ಲಿ ಈ ಘಟನೆ ನಡೆದಿದೆ. ವೀಡಿಯೋದಲ್ಲಿರುವ ಈ ವ್ಯಕ್ತಿ ಸುತ್ತಮುತ್ತಲಿನ ಮಹಿಳೆಯರು ಮತ್ತು ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡುವ ಕೆಲಸ ಮಾಡುತ್ತಿದ್ದನು. ಮೊದಲಿಗೆ ಅವನು ತುಂಬಾ ಜನನಿಬಿಡ ಪ್ರದೇಶದಲ್ಲಿ ಇದ್ದುದನ್ನು ನಾನು ನೋಡಿದಾಗ, ನನಗೆ ಅವನ ಮೇಲೆ ಅನುಮಾನವಾಯಿತು. ಹಾಗಾಗಿ, ವೀಡಿಯೊ ರೆಕಾರ್ಡ್ ಮಾಡುತ್ತ ಹಿಂಬಾಲಿಸಿದೆ” ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭ್ರಷ್ಟ ಅಧಿಕಾರಿಗಳ ಮನೆ-ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
“ವಿಡಿಯೋ ತೆಗೆದುಕೊಂಡ ನಂತರ ಮಾಲ್‌ನ ಸೆಕ್ಯುರಿಟಿಗೆ ಹೋಗಿ ಈ ಬಗ್ಗೆ ದೂರು ನೀಡಿದೆ. ಬಳಿಕ ಆ ವಯಸ್ಸಾದ ವ್ಯಕ್ತಿಯನ್ನು ಹುಡುಕಿದೆವು. ಆದರೆ, ಅಷ್ಟರಲ್ಲಾಗಲೇ ಆ ವ್ಯಕ್ತಿ ತಪ್ಪಿಸಿಕೊಂಡಿದ್ದನು. ಹೀಗಾಗಿ, ಮಾಲ್ ಮ್ಯಾನೇಜ್‌ಮೆಂಟ್ ಮತ್ತು ಸೆಕ್ಯುರಿಟಿಗೆ ಮಾಹಿತಿ ನೀಡಿದ್ದು, ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇಂತಹ ವ್ಯಕ್ತಿಗಳು ಮಹಿಳೆಯರೊಂದಿಗೆ ಈ ರೀತಿ ಅನುಚಿತವಾಗಿ ವರ್ತಿಸಲು ನಾಚಿಕೆ ಆಗಬೇಕು” ಎಂದು ಹೇಳಿದ್ದಾರೆ.
ಇನ್ನು ಈ ವಿಡಿಯೋ ವೈರಲ್ ಆಗಿರುವ ಬಗ್ಗೆ ಮಾಗಡಿ ರೋಡ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೃತ್ಯದ ಬಗ್ಗೆ ಇದುವರೆಗೂ ಯಾರು ಲಿಖಿತ ದೂರು ನೀಡಿಲ್ಲ. ಹಾಗಾಗಿ, ವಿಡಿಯೋ ಆಧರಿಸಿ ಪೊಲೀಸರು ತನಿಖೆ ನಡೆಸಲಿದ್ದಾರೆ.