ವಕೀಲ ಈರಣ್ಣಗೌಡ ಪಾಟೀಲ್ ಅವರ ಹತ್ಯೆ ಖಂಡಿಸಿ ಆರೋಪಿಗಳನ್ನು ತಕ್ಷಣ ಬಂಧನಕ್ಕೆ ಒತ್ತಾಯಿಸಿ ಜಿಲ್ಲಾ ನ್ಯಾಯವಾದಿಗಳ ಸಂಘ ಹೈಕೋರ್ಟ್ ಯುನಿಟ್ ವತಿಯಿಂದ ಪ್ರತಿಭಟನೆ ನಡೆಸಿದರು.
ಕಲಬುರಗಿ ನಗರದಲ್ಲಿ ಶುಕ್ರವಾರ ತಿಮ್ಮಾಪುರಿ ವೃತ್ತದ ಹತ್ತಿರ ಬೃಹತ್ ಮಾನವ ಸರಪಳಿ ನಿರ್ಮಿಸಿದ ವಕೀಲರು ನಂತರ ಟೈರ್ ಗೆ ಬೆಂಕಿ ಹಚ್ಚಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಗುಪ್ತಲಿಂಗ್ ಎಸ್. ಪಾಟೀಲ್ ಮಾತನಾಡಿ, “ಸಮವಸ್ತ್ರದಲ್ಲಿ ನ್ಯಾಯಾಲಯಕ್ಕೆ ತೆರಳುವ ವೇಳೆ ದುಷ್ಕರ್ಮಿಗಳು ಹಾಡುಹಗಲೇ ಅಟ್ಟಾಡಿಸಿ ಭೀಕರವಾಗಿ ಹತ್ಯೆಗೈದ ಘಟನೆ ವಕೀಲರಿಗೆ ಆತಂಕ ಮೂಡಿಸಿದೆ. ವಕೀಲರಿಗೆ ಸಂರಕ್ಷಣೆ ನೀಡುವುದರಲ್ಲಿ ಸರ್ಕಾರ ವಿಫಲವಾಗಿದೆ. ದುಷ್ಕೃತ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು” ಎಂದು ಒತ್ತಾಯಿಸಿದರು.
ಬೀದರ್ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ :
ಕಲಬುರಗಿಯಲ್ಲಿ ಗುರುವಾರ ವಕೀಲ್ ಈರಣ್ಣಗೌಡ ಅವರ ಬರ್ಬರ ಹತ್ಯೆ ಖಂಡಿಸಿ ಬೀದರ ಜಿಲ್ಲಾ ವಕೀಲರ ಸಂಘ ಬೀದರನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

“ಕಳೆದ ಕೆಲ ದಿನಗಳ ಹಿಂದೆ ಭಾಲ್ಕಿಯ ವಕೀಲರಾದ ಧನಲಕ್ಷ್ಮಿಯವರ ಮನೆಗೆ ಹೋಗಿ ತಡರಾತ್ರಿ ಪೊಲೀಸರು ದೌರ್ಜನ್ಯ ಎಸಗಿದ್ದರು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಕೊಲೆ ಪ್ರಕರಣಗಳಿಂದ ವಕೀಲರು ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇದನ್ನು ತಡೆಯಲು ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು” ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಮಹೇಶಕುಮಾರ ಎಸ್. ಪಾಟೀಲ್, ಉಪಾಧ್ಯಾಕ್ಷೆ ಹೇಮಾ ಬಿರಾದರ್, ಜಂಟಿ ಕಾರ್ಯದರ್ಶಿ ರವಿಕಾಂತ ಪಾಟೀಲ್, ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಬಂಬುಳಗೆ, ಖಜಾಂಚಿ ಕೋಮಲ್ ಪಾಟೀಲ್ ಸೇರಿದಂತೆ ಇತರರಿದ್ದರು.
ಸುರುಪುರದಲ್ಲಿ ಬೈಕ್ ರ್‍ಯಾಲಿ ನಡೆಸಿ ಆಕ್ರೋಶ :
ಹಾಡುಹಗಲೇ ಕಲಬುರಗಿಯಲ್ಲಿ ವಕೀಲ ಈರಣ್ಣಗೌಡ ಪಾಟೀಲ್ ಅವರ ಹತ್ಯೆ ಘಟನೆ ಖಂಡಿಸಿ ಸುರುಪುರ ವಕೀಲರ ಸಂಘದಿಂದ ವಕೀಲರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ತಹಸೀಲ್ದಾರ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ನಗರದ ಪ್ರಮುಖ ಮಾರ್ಗದಲ್ಲಿ ಬೈಕ್ ರ್‍ಯಾಲಿ ನಡೆಸಿ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರ ಹಾಕಿದರು. ನ್ಯಾಯಾಲಯಕ್ಕೆ ಆಗಮಿಸುತ್ತಿದ್ದ ವಕೀಲ ಈರಣ್ಣಗೌಡ ಪಾಟೀಲ್ ಅವರನ್ನು ಹಾಡುಹಗಲೇ ನಡು ರಸ್ತೆಯಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ ಎಂದರು.

“ಕೊಲೆಗಡಕರನ್ನು ಶೀಘ್ರದಲ್ಲಿ ಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಮರಣ ದಂಡನೆ ಶಿಕ್ಷೆ ವಿಧಿಸಬೇಕು. ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಸರಕಾರ ಬೆಳಗಾವಿ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಮಂಡಿಸಿ ವಕೀಲರಿಗೆ ರಕ್ಷಣೆ ನೀಡಬೇಕು” ಎಂದು ಒತ್ತಾಯಿಸಿದರು.
ಚಿಂಚೋಳಿ ತಾಲೂಕು ವಕೀಲರ ಸಂಘ ಆಕ್ರೋಶ :
ಕಲಬುರಗಿಯ ಜಿಲ್ಲೆಯ ಉದನೂರು ಗ್ರಾಮದ ಯುವ ವಕೀಲ ಈರಣ್ಣಗೌಡ ಪಾಟೀಲ್ ಅವರ ಭೀಕರ ಹತ್ಯೆ ಖಂಡಿಸಿ ಚಿಂಚೋಳಿ ತಾಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಯಿತು.
ನಗರದ ಮುಖ್ಯರಸ್ತೆಯ ಮೇಲೆ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

“ಕಲಬುರಗಿ ನಗರದಲ್ಲಿ ಹಾಡುಹಗಲೇ ವಕೀಲರೊಬ್ಬರ ಕೊಲೆ ನಡೆದಿರುವ ಘಟನೆ ಅತ್ಯಂತ ಖಂಡನೀಯ, ಇಂತಹ ಘಟನೆಗಳಿಂದ ವಕೀಲರಿಗೆ ಆತಂಕ ಸೃಷ್ಠಿಯಾಗಿದೆ. ಕೂಡಲೇ ಹತ್ಯೆಗೈದ ಆರೋಪಿಗಳಿಗೆ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ವಕೀಲರ ರಕ್ಷಣೆಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಸುವರ್ಣಸೌಧದ ಅಂಗಳದಲ್ಲಿ ಡಿ.12ರಂದು ‘ಕರ್ನಾಟಕ ಸಂಭ್ರಮ’ ವಿಶೇಷ ಕಾರ್ಯಕ್ರಮ
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಕಾರ್ಯದರ್ಶಿ ಜಿ.ಕೆ.ಗೋಖಲೆ ಹಾಗೂ ವಕೀಲರಾದ ಜಗನಾಥ ಗಂಜಗಿರಿ, ಸುದರ್ಶನ ಬಿರಾದರ, ನಾಗಭೂಷಣ, ಶ್ರೀನಿವಾಸ, ಮಾಣಿಕರಾವ, ಚಂದ್ರಶೇಖರ, ಶರಣು, ವಿರೇಂದ್ರ ಸೇರಿದಂತೆ ಸಾಮಾಜಿಕ ಕಾರ್ಯಕರ್ತರು, ಮುಖಂಡರು ಇದ್ದರು.