ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅ.27 ರಂದು ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅ.27 ರಿಂದ ಡಿ.12 ರವರೆಗೆ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಅಭಿಯಾನ ಆರಂಭಿಸಿದೆ.
“ವಿಶೇಷ ನೋಂದಣಿ ಅಭಿಯಾನಗಳನ್ನು ಬಿಬಿಎಂಪಿಯ ಎಲ್ಲ ಕಂದಾಯ ಅಧಿಕಾರಿಗಳು, ಸಹ ಕಂದಾಯ ಅಧಿಕಾರಿಗಳು, ವಾರ್ಡ್ ಕಚೇರಿಗಳು, ಮತಗಟ್ಟೆಗಳಲ್ಲಿ ಆಯೋಜಿಸಲಾಗಿದೆ. ಮತದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕುರಿತು ಆನ್ಲೈನ್ ಮುಖಾಂತರ ಸ್ವಯಂ ಪ್ರೇರಿತವಾಗಿ Web Portal-Voters.eci.gov.in ಅಥವಾ Voter Helpline Mobile App ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ” ಎಂದು ಪಾಲಿಕೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಧ್ವಂಸಗೊಳಿಸಿದ ಆರು ಕಿಡಿಗೇಡಿಗಳ ಬಂಧನ
“ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಹಮ್ಮಿಕೊಂಡಿರುವ ವಿಶೇಷ ಅಭಿಯಾನದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು” ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್ ಅವರು ತಿಳಿಸಿದ್ದಾರೆ.
ನವೆಂಬರ್ 18 (ಶನಿವಾರ), ನವೆಂಬರ್ 19 (ಭಾನುವಾರ), ಡಿಸೆಂಬರ್ 2 (ಶನಿವಾರ), ಡಿಸೆಂಬರ್ 3 (ಭಾನುವಾರ) ರಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.