ಕಾಸ್ಮೋಪೋಲಿಟನ್ ನಗರವಾಗಿರುವ ರಾಜಧಾನಿ ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಜನಪ್ರತಿನಿಧಿಗಳೇ ಇಲ್ಲದೆ, ನಾಲ್ಕನೇ ಬಾರಿಗೆ ಅಧಿಕಾರಿಗಳು ಬಜೆಟ್ ಮಂಡಿಸುತ್ತಿದ್ದಾರೆ. 2024-25ರ ಆರ್ಥಿಕ ವರ್ಷದಲ್ಲಿ ಫೆ.29ರಂದು ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತರಾಗಿ ನಿಯೋಜನೆಗೊಂಡಿರುವ ಶಿವಾನಂದ್ ಕಲಕೇರಿ ಅವರು ಪಾಲಿಕೆಯ ಆಯವ್ಯಯ ತಂಡಕ್ಕೆ ಅಭಿನಂದಿಸಿ, ಪೌರಕಾರ್ಮಿಕರ ಸೇವೆ ಸ್ಮರಿಸಿ ಬಜೆಟ್ ಮಂಡಿಸಿದ್ದಾರೆ.
ಕಳೆದ ಮೂರು ವರ್ಷದಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಎರಡು ಬಾರಿ ಹಾಗೂ ಜಯರಾಂ ರಾಯ್‍ಪುರ ಅವರು ಒಂದು ಬಾರಿ ಬಜೆಟ್ ಮಂಡಿಸಿದ್ದಾರೆ. ಅಧಿಕಾರಿಗಳೇ ಮಂಡಿಸಿರುವ ನಾಲ್ಕನೇ ಬಜೆಟ್‌ಅನ್ನು ಕಲಕೇರಿ ಮಂಡಿಸಿದ್ದಾರೆ.
2024-25ರ ಬಜೆಟ್ ಗಾತ್ರ ಬರೋಬ್ಬರಿ ₹12,369 ಕೋಟಿಯಾಗಿದೆ. ಆದಾಯ ನಿರೀಕ್ಷೆ ₹12,369.50 ಕೋಟಿ ಇದ್ದು, ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಅತಿ ಹೆಚ್ಚು ಹಣ ಮೀಸಲು ಇರಿಸಲಾಗಿದೆ. ₹6,661 ಕೋಟಿ ಹಣ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲು ಇರಿಸಲಾಗಿದೆ. ಇನ್ನು ಬ್ರ್ಯಾಂಡ್ ಬೆಂಗಳೂರಿಗೆ 1,580 ಕೋಟಿ ಅನುದಾನ ಮೀಸಲಿರಿಸಿದೆ. ಆಸ್ತಿ ತೆರಿಗೆ ಕಾಯ್ದೆ ತಿದ್ದುಪಡಿ ಹಿನ್ನೆಲೆ ಈ ಸಾಲಿನಲ್ಲಿ 15 ಲಕ್ಷ ಜನರಿಗೆ ಸುಮಾರು ₹2,500 ಕೋಟಿ ಮನ್ನಾ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಬಜೆಟ್‌ನಲ್ಲಿ ಜಾಹೀರಾತು ನಿಯಮ ಜಾರಿ ಘೋಷಿಸಲಾಗಿದ್ದು, 2024-25ನೇ ಸಾಲಿನಲ್ಲಿ ಜಾಹೀರಾತು ಪಾಲಿಸಿ ಜಾರಿ ಮಾಡಿ ₹500 ಕೋಟಿ ಆದಾಯ ನಿರೀಕ್ಷೆ ಹೊಂದಲಾಗಿದೆ.
16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿ
ಪ್ರಸ್ತುತ ಪಾಲಿಕೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆ ಇದ್ದು, ಪ್ರಸ್ತುತ ನಾನಾ ಇಲಾಖೆಯಿಂದ ಎರವಲು ಸೇವೆಯನ್ನು ಪಡೆಯಲಾಗುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಪರಿಷ್ಕೃತ ವೃಂದ ಮತ್ತು ನೇಮಕಾತಿ ನಿಯಮ ಪಾಲಿಸಲಾಗುತ್ತದೆ. ಪ್ರಸ್ತುತ ಖಾಲಿ ಇರುವ ಸಹಾಯಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರ ಹುದ್ದೆಗಳ ನೇರ ನೇಮಕಾತಿಗಾಗಿ ಪ್ರಸ್ತಾವನೆಯನ್ನು ಈಗಾಗಲೇ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಸಲ್ಲಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಈಗಾಗಲೇ, ಪಾಲಿಕೆಯಲ್ಲಿ 1,435 ಖಾಯಂ ಹಾಗೂ 15,530 ನೇರ ಪಾವತಿ ಅಡಿಯಲ್ಲಿ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಾಲಿನಲ್ಲಿ 16,000 ಪೌರ ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
ನಾಗರಿಕರಿಗೆ ಪಾಲಿಕೆಯು ಸೇವೆಗಳನ್ನು ಸುಗಮವಾಗಿ ವಿಸ್ತರಿಸುವ ಮತ್ತು ದೃಷ್ಟಿಕೋನದಿಂದ 2023-24ನೇ ಸಾಲಿನಲ್ಲಿ ಅಭಿವೃದ್ದಿಪಡಿಸಿದ ತಂತ್ರಾಂಶಗಳನ್ನು ನಿರ್ವಹಿಸುವ ಜೊತೆ ಜೊತೆಗೆ ಈ ಸಾಲಿನಲ್ಲಿ ಬ್ಯಾಂಡ್ ಬೆಂಗಳೂರು ಪೋರ್ಟಲ್, ಲೇಕ್ಸ್ ಮಾನಿಟರಿಂಗ್ ಸಿಸ್ಟಂ, ಪಾರ್ಕ್ ಮಾನಿಟರಿಂಗ್ ಸಿಸ್ಟಂ, ಪಾಲಿಕೆ ಭೂಮಿ. ಕ್ಯೂ- ಆರ್ ಕೋಡ್ (ಜನಮಿತ್ರ) ರೋಡ್ ಇನ್‌ವೆಂಟರಿ ಸಿಸ್ಟಂ, ಇಂದಿರಾ ಕ್ಯಾಂಟಿನ್ (ಬಿಲ್ಲಿಂಗ್), ಇಂದಿರಾ ಕ್ಯಾಂಟಿನ್ ಮಾನಿಟರಿಂಗ್ ಸಿಸ್ಟಂ, ಕ್ಯೂ-ಆರ್ ಕೋಡ್ ಇಂದಿರಾ ಕ್ಯಾಂಟಿನ್, ಕ್ವಾಫಿ ಜುಡಿಷಿಯಲ್ ಅಥಾರೀಟೀಸ್ ಆಫ್ ಬಿಬಿಎಂಪಿ, ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಂ, ಇ-ಆಫೀಸ್, ವರ್ಕ್ ಮ್ಯಾನೇಜೆಟ್ ಸಿಸ್ಟಂ, ಹಸಿರು ರಕ್ಷಕ (ಅರಣ್ಯ ಇಲಾಖೆ), ಸಿಲ್ಟ್ ಅಂಡ್ ಡೆಬ್ರಿಸ್ ಮಾನಿಟರಿಂಗ್ ಸಿಸ್ಟಂ, ಆಡಿಟ್ ರಿಕವರಿ ಮಾಡ್ಯುಲ್, ಪೆನ್ಷನ್ ಮಾನಿಟರಿಂಗ್ ಸಿಸ್ಟಂ ಮುಂತಾದ ತಂತ್ರಾಂಶಗಳನ್ನು 2024-25ನೇ ಸಾಲಿನಲ್ಲಿ ಅಭಿವೃದ್ಧಿಪಡಿಸುವ ಯೋಜನೆಗಳಿವೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭ
ಪಾಲಿಕೆಯ ಕೇಂದ್ರ ಕಚೇರಿ ವ್ಯಾಪ್ತಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಜ್ಞಾನಾರ್ಜನೆಗೆ ಸುಸಜ್ಜಿತ ಗ್ರಂಥಾಲಯವೊಂದನ್ನು ಸ್ಥಾಪಿಸಲು ಉದ್ದೇಶಿಸಿದೆ. ಜೊತೆಗೆ ಅಧಿಕಾರಿ ಮತ್ತು ಸಿಬ್ಬಂದಿಗಳ ತರಬೇತಿಗಾಗಿ ಪಾಲಿಕೆಯು ತನ್ನದೇ ಆದ ಒಂದು ತರಬೇತಿ ಘಟಕವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಹಾಗೆಯೇ, ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಯೋಜಿಸಿದೆ.
ಬ್ರ್ಯಾಂಡ್ ಬೆಂಗಳೂರು ಯೋಜನೆ
ಕಂದಾಯ ಇಲಾಖೆಯಲ್ಲಿ ತೆಗೆದುಕೊಳ್ಳುವ ಹೊಸ ನೀತಿ ಮತ್ತು ಸುಧಾರಣೆಗಳಿಂದ ಕ್ರೋಢಿಕೃತವಾಗುವ ಹೆಚ್ಚಿನ ತೆರಿಗೆ ಹಣವನ್ನು ನೇರವಾಗಿ ಬ್ರ್ಯಾಂಡ್ ಬೆಂಗಳೂರು ಯೋಜನೆಗಳಡಿಯ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗುವುದು. ಈ ಉದ್ದೇಶಕ್ಕಾಗಿ ಪ್ರತ್ಯೇಕ ESCROW ಖಾತೆಯನ್ನು ತೆರೆದು ಆದ್ಯತೆಯ ಮೇರೆಗೆ ಹಣ ಪಾವತಿ ಮಾಡಲಾಗುವುದು. ಇದರಿಂದ ಈ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಹಕಾರಿಯಾಗುವುದು ಎಂದು ಹೇಳಿದೆ.
“ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಸಮಗ್ರವಾಗಿ ಪರಿಶೀಲಿಸಿ, ಧೀರ್ಘಾವಧಿ ಪರಿಹಾರಗಳನ್ನು ಕಂಡುಕೊಳ್ಳಲು ‘ಬ್ರ್ಯಾಂಡ್ ಬೆಂಗಳೂರು ಸುಗುಮ ಸಂಚಾರ’ ಶೀರ್ಷಿಕೆ – ಅಡಿಯಲ್ಲಿ ‘ಬೆಂಗಳೂರು ನಗರ ಸಮಗ್ರ ಸಂಚಾರ ಯೋಜನೆ’ ತಯಾರಿಕೆಗೆ ಯೋಜನೆ ರೂಪಿಸಿದೆ. ಯೋಜನೆಯಂತೆ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಇರುವ 2 ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಸುರಂಗ ಮಾರ್ಗ ನಿರ್ಮಾಣಕ್ಕಾಗಿ ₹200 ಕೋಟಿ Seed Money ಒದಗಿಸಲಾಗಿದೆ” ಎಂದು ಹೇಳಿದೆ.
ಹಾಗೆಯೇ, ಕನಕಪುರ ಮುಖ್ಯರಸ್ತೆಯಿಂದ ಬನ್ನೇರುಘಟ್ಟ ಮುಖ್ಯರಸ್ತೆ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಣ್ಣೂರುನಿಂದ ಬಾಗಲೂರು ರಸ್ತೆಗಳ ಅಗಲೀಕರಣ, ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಚಾಮರಾಜಪೇಟೆ ವ್ಯಾಪ್ತಿಯಲ್ಲಿರುವ ಪಾದರಾಯನಪುರದ ರಸ್ತೆಯು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮತ್ತು ಅಭಿವೃದ್ಧಿ ದೃಷ್ಟಿಕೋನದಿಂದ ಅತಿ ಅವಶ್ಯವಿರುವ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿಗೆ ಒಟ್ಟಾರೆ ₹130 ಕೋಟಿ ಮೀಸಲಿಡಲಾಗಿದೆ.
ಬಳ್ಳಾರಿ ರಸ್ತೆಯಿಂದ (ಸಾದಹಳ್ಳಿ ಗೇಟ್) ಬೇಗೂರು ಮಾರ್ಗವಾಗಿ ಹಾಗೂ ಸಾತನೂರು ಮೀಸಗಾನಹಳ್ಳಿ ಮುಖಾಂತರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗ ನಿರ್ಮಿಸಲು ಟಿ.ಡಿ.ಆರ್ ಆಧಾರದಲ್ಲಿ ಜಮೀನುಗಳನ್ನು ವಶಕ್ಕೆ ಪಡೆದು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು. ಕೆಂಗೇರಿ ಉಪನಗರವನ್ನು ಮೈಸೂರು ರಸ್ತೆಗೆ ನೇರವಾಗಿ ಸಂಪರ್ಕಿಸಲು ರೈಲ್ವೆ ಇಲಾಖೆಯವರ ಸಹಯೋಗದೊಂದಿಗೆ ರೈಲ್ವೆ ಮೇಲು ಸೇತುವೆ ನಿರ್ಮಿಸಲು ಡಿಪಿಆರ್ ಸಿದ್ದಪಡಿಸಿ ಕಾರ್ಯ ಅನುಷ್ಟಾನ ತರಲಾಗುವುದು.
ರಾಜಕಾಲುವೆಗಳ ಎರಡು ಇಕ್ಕೆಲಗಳಲ್ಲಿ ಲಘು ವಾಹನ ಸಂಚಾರಕ್ಕೆ ರಸ್ತೆ ಪಥ, ಸೈಕಲ್ ಪಥಗಳು, ಜನ ಸ್ನೇಹಿ ನಡಿಗೆ ಮಾರ್ಗಗಳನ್ನು ಅಭಿವೃದ್ದಿ ಪಡಿಸಲು ಉದ್ದೇಶಿಸಲಾಗಿದೆ. ಒಟ್ಟು 300 ಕಿ.ಮೀ ಉದ್ದದ ಇಂತಹ ರಸ್ತೆಗಳನ್ನು ₹600 ಕೋಟಿ ವೆಚ್ಚದಲ್ಲಿ ಮೂರು ವರ್ಷದಲ್ಲಿ ನಿರ್ಮಾಣ ಮಾಡಲಾಗುವುದು.
“ಸುಗಮ ಸಂಚಾರಕ್ಕಾಗಿ ಗುಂಡಿ ರಹಿತ, ಉತ್ತಮ ಗುಣಮಟ್ಟದ, ಕಡಿಮೆ ನಿರ್ವಹಣಾ ವೆಚ್ಚದ ಮತ್ತು ಧೀರ್ಘಾವಧಿ ಬಾಳಿಕೆಯ ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ಮಿಸಲಾಗುವುದು. ಸುಮಾರು 145 ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆಗಳನ್ನು ₹800 ಕೋಟಿ ಸರ್ಕಾರದ ಅನುದಾನ ಮತ್ತು ₹900 ಕೋಟಿ ಪಾಲಿಕೆಯ ಆಂತರಿಕ ಸಂಪನ್ಮೂಲಗಳಿಂದ 2 ವರ್ಷಗಳ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. 2024-25ನೇ ಸಾಲಿನ ಪಾಲಿಕೆಯ ಆಯವ್ಯಯದಲ್ಲಿ ಮೊದಲ ಕಂತಿನ ₹300 ಕೋಟಿ ಒದಗಿಸಿದೆ” ಎಂದು ಹೇಳಿದೆ.
225 ವಾರ್ಡಗಳಿಗೆ ₹450 ಕೋಟಿ
ಪಾಲಿಕೆಯ ವಾರ್ಡ್‌ಗಳ ನಿರ್ವಹಣೆ ಕಾಮಗಾರಿಗಳಿಗಾಗಿ ಪ್ರತಿ ವಾರ್ಡಗೆ ₹75 ಲಕ್ಷಗಳಂತೆ ಅನುದಾನ ಹಂಚಿಕೆ ಮಾಡಲಾಗಿದೆ. ಚರಂಡಿಗಳ ಹೂಳೆತ್ತುವಿಕೆ, ನಿರ್ವಹಣೆಗೆ ತಲಾ 30 ಲಕ್ಷ, ರಸ್ತೆ ಗುಂಡಿ ಮುಚ್ಚುವಿಕೆಗೆ ತಲಾ ₹15 ಲಕ್ಷ, ಪಾದಚಾರಿ ಮಾರ್ಗ ನಿರ್ವಹಣೆಗೆ ತಲಾ ₹25 ಲಕ್ಷ, ಮಾನ್ಸೂನ್ ಕಂಟ್ರೋಲ್ ರೂಂ ನಿರ್ವಹಣೆಗೆ ತಲಾ ₹5 ಲಕ್ಷ ಇದರ ಜತೆಗೆ ಪ್ರತಿ ವಾರ್ಡನಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತಲಾ ₹1.25 ಕೋಟಿ ಅನುದಾನ ನೀಡಲಾಗುವುದು. ಒಟ್ಟಾರೆಯಾಗಿ 225 ವಾರ್ಡಗಳಲ್ಲಿ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ₹450 ಕೋಟಿ ಒದಗಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಅಪಪ್ರಚಾರದ ಸುದ್ದಿ ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ನಟ ಜಗ್ಗೇಶ್
ವೆಚ್ಚ–ಆದಾಯ ನಿರೀಕ್ಷೆ ಹೀಗಿದೆ
ಕಾರ್ಯಾಚರಣೆ ಹಾಗೂ ನಿರ್ವಹಣೆ ವೆಚ್ಚ – ₹2271 ಕೋಟಿ, ಸಿಬ್ಬಂದಿ ವೆಚ್ಚ ₹1607 ಕೋಟಿ. ಆಡಳಿತ ವೆಚ್ಚ – ₹389 ಕೋಟಿ, ಠೇವಣಿ ಮತ್ತು ಕರ ಮತು ಪಾವತಿ/ವೆಚ್ಚ- ₹527 ಕೋಟಿ, ಆಸ್ತಿ ತೆರಿಗೆಯಿಂದ ₹4470 ಕೋಟಿ ಆದಾಯ ನಿರೀಕ್ಷೆ, ತೆರಿಗೆಯೇತರ ಆದಾಯ ₹3097.91 ಕೋಟಿ ನಿರೀಕ್ಷೆ, ರಾಜ್ಯ ಸರ್ಕಾರದಿಂದ ₹3589.58 ಕೋಟಿ ರೂ ನಿರೀಕ್ಷೆ, ಕೇಂದ್ರ ಸರ್ಕಾರದಿಂದ ₹488 ಕೋಟಿ ರೂ ನಿರೀಕ್ಷೆ, ಅಸಾಧಾರಣ ಆದಾಯದಿಂದ ₹724 ಕೋಟಿ ಆದಾಯ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
2024-25ನೇ ವರ್ಷದಲ್ಲಿ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ₹12,371.63 ಕೋಟಿ ಇದ್ದು, ಒಟ್ಟು ಖರ್ಚು ₹12,369.46 ಕೋಟಿ ಇರಲಿದೆ. ಒಟ್ಟು ₹2.17 ಕೋಟಿ ಉಳಿತಾಯವಾಗಲಿದೆ.